Advertisement

ಛತ್ರಿ ಚಿತ್ತಾರ; ಛತ್ರಿ ಮೇಲೆ ರಾಜಸ್ಥಾನಿ ರಂಗೋಲಿ!

06:00 AM May 23, 2018 | |

ಬಿಸಿಲ ಬೇಗೆಗೂ ಬೇಕು, ಹೇಳದೆ ಕೇಳದೆ ಬರುವ ಮಳೆಗೂ ಬೇಕು ಛತ್ರಿ. ಹಾಗಾಗಿ ಎಲ್ಲರ ಬ್ಯಾಗ್‌ನಲ್ಲಿಯೂ ಛತ್ರಿಗೊಂದು ಕಾಯಂಗ ಇರುತ್ತದೆ. ಕಪ್ಪು ಬಣ್ಣದ ಕೊಡೆ ಹಳೆಯದ್ದಾಯಿತು. ಈಗೇನಿದ್ದರೂ ಬಣ್ಣಬಣ್ಣದ ಕೊಡೆಗಳ ಕಾಲ. ಕೇವಲ ಬಣ್ಣವಷ್ಟೇ ಅಲ್ಲ ಛತ್ರಿಯ ಮೇಲೆ ಚಿತ್ತಾರವೂ ಮೂಡಿದೆ…
 
ಮುಂಗಾರು ಆರಂಭವಾಗಿದೆ. ಮಹಿಳೆಯರು ಮತ್ತು ಮಕ್ಕಳು ಬೋರಿಂಗ್‌ ಬ್ಲಾಕ್‌ ಬದಲಿಗೆ ಹೊಸ ಹೊಸ ವಿನ್ಯಾಸಗಳ ಕೊಡೆಗಳನ್ನು ಖರೀದಿಸುತ್ತಿದ್ದಾರೆ. ಟ್ರಾನ್ಸ್‌ಪರೆಂಟ್‌ (ಪಾರದರ್ಶಕ) ಪ್ಲಾಸ್ಟಿಕ್‌ ಕೊಡೆಗಳು, ಕಾಮನಬಿಲ್ಲಿನ ಬಣ್ಣವುಳ್ಳ ಛತ್ರಿಗಳು, ಮಕ್ಕಳ ಇಷ್ಟದ ಕಾಟೂìನ್‌ ಚಿತ್ರವುಳ್ಳ ಕೊಡೆಗಳು ತುಂಬಾ ಸಮಯದಿಂದ ಮಾರುಕಟ್ಟೆಯಲ್ಲಿವೆ. ಆದರೆ, ಇದೀಗ ಟ್ರೆಂಡ್‌ ಆಗುತ್ತಿರುವ ಸ್ಟೈಲ್‌ ಎಂದರೆ ರಾಜಸ್ಥಾನಿ ಛತ್ರಿಗಳು. 

Advertisement

ಕೊಡೆಯ ಮೇಲೆ ಕಲೆ
ರಾಜಸ್ಥಾನಿ ಎಂದ ಕೂಡಲೇ ಕಣ್ಣ ಮುಂದೆ ಕೆಂಪು, ನೀಲಿ, ಹಸಿರು, ಕೇಸರಿ, ಹಳದಿಯಂಥ ಗಾಢ ಬಣ್ಣಗಳು ಮೂಡುತ್ತವೆ. ಅಂತೆಯೇ ಇಂಥ ಛತ್ರಿಗಳಲ್ಲಿ ಕೂಡ ಗಾಢ ಬಣ್ಣಗಳ ಚಿತ್ತಾರವಿರಲಿದೆ. ಕಪ್ಪು, ಕಂದು, ಬೂದಿ, ಬಿಳಿಯಂಥ ಬಣ್ಣಗಳ ಬಳಕೆ ಕಾಣಸಿಗುವುದಿಲ್ಲ. ಫ‌ಡ್‌ (ಮೇವಾಡ್‌), ಮಾರು-ಗುರ್ಜರ್‌, ಕಜರಿ ಮುಂತಾದ ಪ್ರಕಾರದ ರಾಜಸ್ಥಾನಿ ಚಿತ್ರಕಲೆಗಳನ್ನು ಛತ್ರಿಯ ಮೇಲೆ ಮೂಡಿಸಲಾಗುತ್ತಿದೆ. ಚಿತ್ರವನ್ನು ಕೇವಲ ಬಣ್ಣಗಳಲ್ಲಿ ಮಾತ್ರವಲ್ಲ, ಕಸೂತಿ ಕೆಲಸದ ಮೂಲಕವೂ ಬಿಡಿಸುತ್ತಾರೆ. ಚಿತ್ರ ಬಿಡಿಸಲು ತಿಳಿದಿದ್ದರೆ ಅಥವಾ ಕಸೂತಿ ಕೆಲಸ ಗೊತ್ತಿದ್ದರೆ ನೀವು ಸಹ ಛತ್ರಿಗಳ ಮೇಲೆ ಚಿತ್ರ ಬಿಡಿಸಿ, ಪ್ರತಿಭೆ ಹಾಗೂ ಕಲೆಯನ್ನು ಪ್ರದರ್ಶಿಸಬಹುದು.

ಬಿಸಿಲಿಗೇ ಹೆಚ್ಚು ಸೂಕ್ತ
ಇಂಥ ಛತ್ರಿಯನ್ನು ಬಟ್ಟೆಯಿಂದ ತಯಾರಿಸುವ ಕಾರಣ ಇವುಗಳನ್ನು ಹೆಚ್ಚಾಗಿ ಬಿಸಿಲಿದ್ದಾಗ ಬಳಸಲಾಗುತ್ತದೆ. ಮಳೆಗಾಲದಲ್ಲಿ ಬಳಸುವುದಾದರೆ ಇಂಥ ಛತ್ರಿಗಳಲ್ಲಿ ಬಟ್ಟೆಯ ಕೆಳಗಡೆ ಪ್ಲಾಸ್ಟಿಕ್‌ ಪದರವೂ ಇರಲಿದೆ. ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ನಮ್ಮ ತಲೆ ಒದ್ದೆ ಆಗುವುದಿಲ್ಲ. ಒಂದು ವೇಳೆ, ಛತ್ರಿಯಲ್ಲಿದ್ದ ಬಟ್ಟೆ ಬಣ್ಣ ಬಿಟ್ಟರೂ ಅದರಿಂದ ನಮ್ಮ ಉಡುಪಿಗೆ ತೊಂದರೆ ಆಗುವುದಿಲ್ಲ.

ಥೀಮ್‌ಗೂ ಸೈ, ಫೋಟೋಗೂ ಜೈ
3 ಫೋಲ್ಡ್‌ ಅಥವಾ 4 ಫೋಲ್ಡ್‌ಗಳಲ್ಲೂ ರಾಜಸ್ಥಾನಿ ಛತ್ರಿಗಳು ಸಿಗುತ್ತವೆ. ಆರಾಮಾಗಿ ಈ ಪುಟ್ಟ ಕೊಡೆಗಳನ್ನು ಬ್ಯಾಗ್‌ನಲ್ಲಿಟ್ಟುಕೊಳ್ಳಬಹುದು. ಮದುವೆ, ಸೀಮಂತ, ಹುಟ್ಟುಹಬ್ಬ, ನಿಶ್ಚಿತಾರ್ಥ ಮತ್ತು ಪಾರ್ಟಿಗಳಲ್ಲಿ ಥೀಮ್‌ ಆಗಿಯೂ ಇವುಗಳನ್ನು ಬಳಸುತ್ತಾರೆ. ದಿಬ್ಬಣ ಬರುವಾಗ ಗಂಡಿನ ಕಡೆಯವರು ಇಂಥ ಛತ್ರಿಗಳನ್ನು ಹಿಡಿದಿರುತ್ತಾರೆ. ವಧುವಿನ ಕಡೆಯವರೆಲ್ಲ ಒಂದು ಬಣ್ಣದ ಛತ್ರಿಗಳನ್ನು ಮತ್ತು ವರನ ಕಡೆಯವರೆಲ್ಲ ಇನ್ನೊಂದು ಬಣ್ಣದ ಛತ್ರಿಗಳನ್ನು ಹಿಡಿದು ಫೋಟೋಗೆ ಪೋಸ್‌ ಕೊಡುತ್ತಾರೆ. ನೋಡಲು ಬಹಳ ಗ್ರ್ಯಾಂಡ್‌ ಆಗಿರುವ ಕಾರಣ ವೆಡ್ಡಿಂಗ್‌ ಫೋಟೋಶೂಟ್‌ಗೂ  ಇದು ಹೇಳಿ ಮಾಡಿಸಿದಂತಿದೆ! 

ರಂಗುರಂಗಿನ ರಂಗೋಲಿ
ಇವುಗಳಲ್ಲಿ ಗೆಜ್ಜೆ, ಮಣಿ, ಕನ್ನಡಿ (ಮಿರರ್‌ ವರ್ಕ್‌), ಗೊಂಡೆ (ತುರುಬು ಕಟ್ಟಲು ಬಳಸುವ ಸಿಂಬೆಯಂಥ ಸಾಧನ), ಗಾಜಿನ ಚೂರುಗಳು, ಚಿಕ್ಕಪುಟ್ಟ ಸರಪಳಿ ಮುಂತಾದವುಗಳನ್ನು ಬಳಸಿ ಬಗೆ-ಬಗೆಯ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಊಹಿಸಲೂ ಸಾಧ್ಯವಾಗದಷ್ಟು ವಿಭಿನ್ನ ಮತ್ತು ವಿಶಿಷ್ಟ ವಿನ್ಯಾಸಗಳಲ್ಲಿ ಇಂಥ ಕೊಡೆಗಳು ಲಭ್ಯ ಇವೆ. ಆನ್‌ಲೈನ್‌ ಮೂಲಕವೂ ಖರೀದಿಸಬಹುದು. ಇಂಥ ಅಲಂಕಾರಿಕ ವಸ್ತುಗಳಿರುವ ಕಾರಣ, ಅವು ಬಿದ್ದುಹೋಗದಂತೆ ಜಾಗ್ರತೆ ವಹಿಸಬೇಕು. ಮಳೆಗಾಲದಲ್ಲಿ ಬಳಸುವ ಮಾಮೂಲಿ ಕೊಡೆಯಂತೆ ರಫ್ ಅಂಡ್‌ ಟಫ್ ಆಗಿ ಬಳಸಿದರೆ ಬೇಗ ಹಾಳಾಗಬಹುದು. ಉಟ್ಟ ಉಡುಪು ಬೋರಿಂಗ್‌ ಆಗಿದ್ದರೂ ಕೈಯಲ್ಲಿರುವ ಕೊಡೆ ಟ್ರೆಂಡಿ ಆಗಿದ್ದರೆ ಎಲ್ಲರ ಗಮನ ಸೆಳೆಯುತ್ತದೆ. 

Advertisement

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next