ಬೆಂಗಳೂರು: ರಾಜಕೀಯ ವಿಶ್ಲೇಷಣೆ ಆಧರಿಸಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸೋಮವಾರದಿಂದ ಚಾಟಿ ಬೀಸಲಿದ್ದು, ಇನ್ನಷ್ಟು ಬಿಗಿ ಕ್ರಮ ಜರುಗಿಸಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜಕೀಯ ಮುಖಂಡರ ಹೇಳಿಕೆ, ವಿಶ್ಲೇಷಣೆ ಆಧರಿಸಿ ಮೈತ್ರಿ ಸರ್ಕಾರ ಅಸ್ಥಿರವಾಗಿದೆ ಎಂಬ ಭಾವನೆಯಿಂದ ಕೆಲ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ಹಾಗಾಗಿ ಅವರ ವಿರುದ್ಧ ಚಾಟಿ ಬೀಸಬೇಕಿದೆ. ಸೋಮವಾರ ಅಧಿಕಾರಿಗಳ ಸಭೆ ಕರೆಯಲಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಮೈತ್ರಿ ಸರ್ಕಾರದ ಪತನಕ್ಕೆ ಈ ಹಿಂದೆ ಗಣೇಶ ಹಬ್ಬದ ಡೆಡ್‌ಲೈನ್ ನೀಡಲಾಗಿತ್ತು. ಈಗ ಸೋಮವಾರಕ್ಕೆ ಡೆಡ್‌ಲೈನ್ ಕೊಟ್ಟಿದ್ದಾರೆ. ನಂತರ ಅದು ಅ.2ಕ್ಕೆ ಹೋಗಬಹುದು. ಆನಂತರ ದಸರಾ ಉತ್ಸವದ ವೇಳೆಗೆ ಡೆಡ್‌ಲೈನ್ ನೀಡಬಹುದು. ಪಂಚಾಂಗ ಸಿಗದಿದ್ದರೆ ಇನ್ನೂ ಮುಂದಕ್ಕೆ ಹೋಗಬಹುದು. ಯಾರು ಏನಾದರೂ ಮಾಡಿಕೊಳ್ಳಲಿ ಸರ್ಕಾರವನ್ನು ಸುಭದ್ರವಾಗಿ ನಡೆಸಲು ಅಗತ್ಯವಿರುವ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಮಹದಾಯಿ ವಿಚಾರ ಬೇಕಿಲ್ಲ. ರಾಜ್ಯದ ಅಭಿವೃದ್ಧಿಗೂ ಮನಸ್ಸಿಲ್ಲ. ಈ ಸರ್ಕಾರವನ್ನು ತೆಗೆದು ಬೇರೆ ಸರ್ಕಾರ ತರಬೇಕೆಂಬುದಷ್ಟೇ ಅವರ ಬಯಕೆ. ಅದು ಅವರಿಂದ ಸಾಧ್ಯವೇ. ಬೆಳಗಾವಿಯಲ್ಲಿ ಶನಿವಾರ ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಜನತಾ ದರ್ಶನ ನಡೆಸಿ ಬೆಳಗಾವಿ ಜನತೆಯ ಸಮಸ್ಯೆ ಆಲಿಸಲಿದ್ದೇನೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿಯವರು ನನ್ನ ಜೊತೆಯಲ್ಲೇ ಇದ್ದಾರೆ. ಅವರು ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ಸಚಿವರು ನನ್ನೊಂದಿಗಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತೀರ್ಮಾನಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.