Advertisement

Galibeedu-Subramanya ರಸ್ತೆ ಅಭಿವೃದ್ಧಿ ಭರವಸೆ: ಸಚಿವ ಈಶ್ವರ ಖಂಡ್ರೆ

11:20 PM Feb 06, 2024 | Team Udayavani |

ಸುಳ್ಯ: ಸುಬ್ರಹ್ಮಣ್ಯ-ಕಡಮಕಲ್ಲು-ಗಾಳಿಬೀಡು ರಸ್ತೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿ ರಸ್ತೆ ಮಾಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರಸ್‌ ಕ್ಲಬ್‌, ಜಿಲ್ಲಾಡಳಿತ, ಜಿ.ಪಂ. ಹಾಗೂ ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ಸಹಕಾರದಲ್ಲಿ ಫೆ. 10ರಂದು ನಡೆಯುವ ಪತ್ರಕರ್ತರ ಗ್ರಾಮ ವಾಸ್ತವ್ಯದ ಕೊಲ್ಲಮೊಗ್ರು ಗ್ರಾಮಕ್ಕೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೋಮವಾರ ಭೇಟಿ ನೀಡಿದರು.

ಈ ಸಂದರ್ಭ ದಕ್ಷಿಣ ಕನ್ನಡ -ಕೊಡಗು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಗಾಳಿಬೀಡು- ಕಡಮಕಲ್ಲು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ ಆಗಬೇಕು, ಕೊಲ್ಲಮೊಗ್ರು, ಹರಿಹರ ಗ್ರಾ.ಪಂ. ವ್ಯಾಪ್ತಿಯ ಗ್ರೀನ್‌ ಟ್ರ್ಯಾಕ್‌ಗಳನ್ನು ಇಕೋ ಟೂರಿಸಂ ನೆಲೆಯಲ್ಲಿ ಅಭಿವೃದ್ಧಿ ಪಡಿಸಬೇಕು. ಹಲವು ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು ಹಾಗೂ ಕಾಡಾನೆ ಹಾಗೂ ಇತರ ವನ್ಯ ಜೀವಿಗಳ ಹಾವಳಿಯಿಂದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದೂ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವರು, ಗ್ರಾಮಸ್ಥರ ಮನವಿಗಳನ್ನು ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದರಲ್ಲದೇ, ಜಿಲ್ಲೆಯ ಪ್ರವಾಸಿ ತಾಣಗಳನ್ನು ಇಕೋ ಟೂರಿಸಂಗೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಹರಿಹರ ಕೊಲ್ಲಮೊಗ್ರು ಸ.ಕೃ.ಪ.ಸ. ಬ್ಯಾಂಕ್‌ ಅಧ್ಯಕ್ಷ ಡಿ.ಎಸ್‌. ಹರ್ಷಕುಮಾರ ದೇವಜನ ಸಹ ಸಮಸ್ಯೆಗಳನ್ನು ವಿವರಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಅಶ್ವತ್‌ ಯಾಲದಾಳು, ಹರಿಹರ ಗ್ರಾ.ಪಂ. ಉಪಾಧ್ಯಕ್ಷ ಜಯಂತ ಬಾಳುಗೋಡು, ಮಾಧವ ಚಾಂತಳ, ಉದಯ ಶಿವಾಲ, ಡಾ| ಸೋಮಶೇಖರ ಕಟ್ಟೆಮನೆ, ಡ್ಯಾನಿ ಯಾಲದಾಳು, ವಿನೂಪ ಮಲ್ಲಾರ, ಶೇಖರ ಅಂಬೆಕಲ್ಲು, ಬೆಳ್ಯಪ್ಪ ಖಂಡಿಗೆ, ಸತೀಶ್‌ ಟಿ.ಎನ್‌., ದಿನೇಶ್‌ ಮಡ್ತಿಲ, ಚಂದ್ರಶೇಖರ ಕೋನಡ್ಕ,ಮೋನಪ್ಪ ಕೊಳಗೆ, ಚೆನ್ನಕೇಶವ ಕೊಲ್ಲಮೊಗ್ರು ಉಪಸ್ಥಿತರಿದ್ದರು.

Advertisement

ಉದಯವಾಣಿ ವರದಿ
ಗಾಳಿಬೀಡು-ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ ಬ್ರಿಟಿಷರ ಕಾಲದಿಂದಲೂ ಬಳಸಲ್ಪಡುತ್ತಿದ್ದು ಅದನ್ನು ಅಭಿವೃದ್ಧಿ ಪಡಿಸಿದಲ್ಲಿ 2 ಜಿಲ್ಲೆಗಳ ಅತೀ ಹತ್ತಿರದ ಸಂಪರ್ಕ ರಸ್ತೆಯಾಗಲಿದೆ. ಪ್ರಸ್ತುತ ರಸ್ತೆ ಸಹಿತ ಈ ಭಾಗದ ಮೂಲ ಸೌಕರ್ಯದ ಕುರಿತು ಸಮಗ್ರ ವರದಿಯನ್ನು ಉದಯವಾಣಿ ಈ ಹಿಂದೆ ಗ್ರಾಮ ಭಾರತ ಸರಣಿಯಲ್ಲಿ ಪ್ರಕಟಿಸಿ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next