ಕನ್ನಡದಲ್ಲಿ “ಲಾಸ್ಟ್ ಬಸ್’ ಚಿತ್ರ ಸದ್ದು ಮಾಡಿದ ಬಗ್ಗೆ ಎಲ್ಲರಿಗೂ ಗೊತ್ತು. ಆ ಚಿತ್ರದ ನಂತರ ಅವಿನಾಶ್ ನರಸಿಂಹರಾಜು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಆದರೆ, ಅವರು ಮಾತ್ರ ಸದ್ದಿಲ್ಲದೆಯೇ ಒಂದಲ್ಲ, ಎರಡಲ್ಲ, ಮೂರ್‍ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೌದು, ಅವಿನಾಶ್ ನರಸಿಂಹರಾಜು, ಈಗ “ಚೇಸ್’ ಎಂಬ ಹೊಸ ಚಿತ್ರದಲ್ಲಿ ಸದ್ದಿಲ್ಲದೆಯೇ ನಟಿಸಿದ್ದಾರೆ.
ಈಗಾಗಲೇ ಶೇ.80ರಷ್ಟು ಚಿತ್ರದ ಚಿತ್ರೀಕರಣ ನಡೆದಿದೆ. ಹರಿ ಆನಂದ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇವರಿಗಿದು ಮೊದಲ ಅನುಭವ. ರಾಧಿಕಾ ಚೇತನ್ ಈ ಚಿತ್ರದ ನಾಯಕಿ. ಇದೊಂದು ಥ್ರಿಲ್ಲರ್ ಚಿತ್ರ. ಒಂದು ತನಿಖೆ ವಿಷಯ ಇಟ್ಟುಕೊಂಡು ಹೆಣೆದಿರುವ ಕಥೆ ಇದು. ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಅವಿನಾಶ್ ನರಸಿಂಹರಾಜು ಇಲ್ಲಿ ಸಿಸಿಬಿ ಕಾಪ್ ಆಗಿ ನಟಿಸುತ್ತಿದ್ದಾರೆ.
ಅವರು ಮಾಡುತ್ತಿರುವ ಹೊಸತರಹದ ಪಾತ್ರವದು. ಅವಿನಾಶ್ ನರಸಿಂಹರಾಜು ಇಲ್ಲಿ ಬರೀ ಕ್ಯಾಮೆರಾ ಮುಂದೆ ನಿಂತು ನಟನೆ ಮಾಡುತ್ತಿಲ್ಲ. ಅವರು ಕಲಾ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. “ಚಿತ್ರದಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ತೆರೆಯ ಮೇಲೆ ಕಾಣಿಸಿಕೊಳ್ಳುವ ಎಲ್ಲಾ ಪಾತ್ರಗಳಿಗೂ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿ ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಅರವಿಂದ್ ರಾವ್ ಸೇರಿದಂತೆ ಕಿರುತೆರೆಯ ಅನೇಕ ಕಲಾವಿದರು ನಟಿಸಿದ್ದಾರೆ.
ಇಲ್ಲಿ ಕಲಾವಿದರನ್ನು ಹೊರತುಪಡಿಸಿದರೆ, ಬಹುತೇಕ ತಂತ್ರಜ್ಞರಿಗೆ ಇದು ಹೊಸ ಅನುಭವ. ಸದ್ಯಕ್ಕೆ ಮಾತಿನ ಭಾಗ ಇನ್ನಷ್ಟು ಉಳಿದಿದೆ. ಚಿತ್ರದಲ್ಲಿ ಹಾಡುಗಳ ಚಿತ್ರೀಕರಣವೂ ಬಾಕಿ ಉಳಿದಿದೆ’ ಎಂದು ವಿವರ ಕೊಡುತ್ತಾರೆ ಅವಿನಾಶ್ ನರಸಿಂಹರಾಜು. ಚಿತ್ರಕ್ಕೆ ಅನಂತ್ ಅರಸ್ ಅವರು ಕ್ಯಾಮೆರಾ ಹಿಡಿದರೆ, ಕಾರ್ತಿಕ್ ಆಚಾರ್ಯ ಸಂಗೀತ ನೀಡಿದ್ದಾರೆ. ಮುಂಬೈನಲ್ಲಿ ಕೆಲ ಸಿನಿಮಾಗಳಿಗೆ ಕೆಲಸ ಮಾಡಿರುವ ಕಾರ್ತಿಕ್ ಆಚಾರ್ಯ ಅವರಿಗೆ ಕನ್ನಡದಲ್ಲಿ “ಚೇಸ್’ ಮೊದಲ ಚಿತ್ರ.
ಇನ್ನು, ಈ ಚಿತ್ರಕ್ಕೆ ಮನೋಹರ್ ಸುವರ್ಣ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಜನಾರ್ಧನ್ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಚಿತ್ರಕ್ಕಿದೆ. ಅದೇನೆ ಇರಲಿ, ಅವಿನಾಶ್ ನರಸಿಂಹರಾಜು ಅಭಿನಯದ ನಾಲ್ಕು ಚಿತ್ರಗಳು ಹೊಸ ವರ್ಷದಲ್ಲಿ ತೆರೆಕಾಣಲು ಸಜ್ಜಾಗಿವೆ. ಆ ಪೈಕಿ ತಮಿಳು ಚಿತ್ರವೂ ಸೇರಿದೆ. ಈಗ ಅವರ ಸಹೋದರ ಅರವಿಂದ್ ನಿರ್ದೇಶಿಸುತ್ತಿರುವ “ಮಟಾಶ್’ ಚಿತ್ರದ ಚಿತ್ರೀಕರಣ ಶುರುವಾಗಿದೆ.