Advertisement

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

09:39 PM Sep 14, 2024 | Team Udayavani |

ಮುಂಬಯಿ ಮೂಲದ ಸಂಗೀತ ಮನೆತನದಲ್ಲಿ ಹುಟ್ಟಿ, ಬಾಲ್ಯದಿಂದಲೇ ಪಿಟೀಲು ವಾದನವನ್ನು ಮೈಗೂಡಿಸಿಕೊಂಡು ಇನ್ನಷ್ಟು ಕಲಿಕೆಗಾಗಿ ಚೆನ್ನೈಗೆ ಸ್ಥಳಾಂತರಗೊಂಡ ಯುವ ಪ್ರತಿಭಾನ್ವಿತ ಪಿಟೀಲು ವಾದಕಿ ಚಾರುಮತಿ ರಘುರಾಮನ್‌ ಅವರು ಇತ್ತೀಚೆಗೆ ಸಂಗೀತ ಕಛೇರಿ ನೀಡಲು ಉಡುಪಿಗೆ ಆಗಮಿಸಿದ್ದರು. ಇವರ ಪತಿ ಅನಂತ್‌ ಆರ್‌. ಕೃಷ್ಣನ್‌ ಮೃದಂಗ ವಾದಕರಾಗಿದ್ದು ಇಬ್ಬರು ಒಟ್ಟಾಗಿ ಕೃಷ್ಣನಗರಿಯಲ್ಲಿ ಕಛೇರಿ ನೀಡಿದ್ದರು. ಈ ಸಂದರ್ಭದಲ್ಲಿ ಉದಯವಾಣಿಯೊಂದಿಗೆ ತಮ್ಮ ಸಂಗೀತ ಸಾಧನೆ ಮತ್ತು ಪ್ರಸ್ತುತ ಬೆಳವಣಿಗೆ, ಕೌಟುಂಬಿಕ ಹಿನ್ನೆಲೆ, ತಯಾರಿ ಹೀಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Advertisement

ಪಿಟೀಲು ವಾದನದ ಆಸಕ್ತಿ ಮೂಡಿದ್ದು ಹೇಗೆ?

ಹುಟ್ಟಿ ಬೆಳೆದದ್ದು ಮುಂಬಯಿಯ ಸಂಗೀತ ಕುಟುಂಬದಲ್ಲಿ. ಅಮ್ಮ(ರಮಾ) ಪಿಟೀಲು ವಾದಕಿಯಾಗಿದ್ದರು. ದೊಡ್ಡ ಅಕ್ಕ ಕೂಡ ಪಿಟೀಲು ವಾದನ ಮಾಡುತ್ತಿದ್ದರು. ಅವರನ್ನು ನೋಡಿ ನಾನೂ ಬಾಲ್ಯದಿಂದಲೇ ಪಿಟೀಲು ಬಾರಿಸುವುದನ್ನು ಆರಂಭಿಸಿದೆ. ತಾಯಿಯೇ ಸಂಗೀತ ಗುರುವಾಗಿದ್ದರಿಂದ ಬೇರೆ ಮಕ್ಕಳಿಗೆ ಕಲಿಸಿಕೊಡುತ್ತಿದ್ದರು. ಅದೂ ಕೂಡ ನನ್ನ ಮೇಲೆ ಪ್ರಭಾವ ಬೀರಿದೆ. 9ನೇ ವಯಸ್ಸಿನಲ್ಲಿರುವಾಗ ಅಮ್ಮನ ಸಂಬಂಧಿಕರೊಬ್ಬರ ಸಲಹೆಯಂತೆ ಅಮ್ಮ ನನ್ನನ್ನು ಸಂಗೀತ ಗುರು ಪ್ರೊ| ಟಿ.ಎನ್‌. ಕೃಷ್ಣನ್‌ ಅವರಲ್ಲಿಗೆ ಕರೆದುಕೊಂಡು ಹೋದರು. ಆ ದಿನದ ಸಂಗೀತ ಕಾರ್ಯಾಗಾರದಲ್ಲಿ ಸಣ್ಣ ಕಛೇರಿಯೊಂದು ನೀಡಿದೆ. ಗುರುಗಳಿಗೆ ಬಹಳ ಇಷ್ಟವಾಯಿತು. ಮರುಮಾತಿಲ್ಲದೆ ಶಿಷ್ಯ ಸ್ವೀಕಾರ ಮಾಡಿದರು. ಅನಂತರ ಮುಂಬಯಿಯಿಂದ ಚೆನ್ನೈಗೆ ಸ್ಥಳಾಂತರಗೊಂಡೆವು. ಅಲ್ಲಿಂದ ಪಿಟೀಲು ಕಲಿಕೆಯ ಎರಡನೇ ಹಂತ ಆರಂಭವಾಯಿತು.

ಗುರುವಿನಿಂದ ಸಂಗೀತ ಹೊರತಾಗಿ ಬೇರೇನು ಕಲಿತಿದ್ದೀರಿ?

ಶ್ರೇಷ್ಠ ಗುರು ಪ್ರೊ| ಟಿ.ಎನ್‌. ಕೃಷ್ಣನ್‌ ಅವರಿಂದ ಕಲಿಕೆ ಎಂದರೆ ಕೇವಲ ಸಂಗೀತದ ಕಲಿಕೆ ಆಗಿರಲಿಲ್ಲ. ಸಂಗೀತದ ವೇದಿಕೆಯಲ್ಲಿ ನಾವು ನೀಡುವ ಕಛೇರಿಗಳಲ್ಲಿ ಹೇಗೆ ವರ್ತಿಸಬೇಕು, ಸಹ ಕಲಾವಿದರೊಂದಿಗೆ ಹೇಗಿರಬೇಕು ಎಂಬುದನ್ನು ಕಲಿಸುತ್ತಿದ್ದರು. ಸಂಗೀತದ ಜೀವನ ಮೌಲ್ಯಗಳನ್ನು ಕಲಿಸುತ್ತಿದ್ದರು. ಉತ್ತಮವಾಗಿ ಪಿಟೀಲು ಬಾರಿಸುವುದೂ ಒಂದು ಕೌಶಲವಾದರೆ, ರಂಗಶಿಸ್ತು ಮತ್ತು ಹಾವಭಾವದ ಹಲವು ತಾಂತ್ರಿಕ ಮಾಹಿತಿಗಳನ್ನು ಒದಗಿಸುತ್ತಿದ್ದರು. ಗುರು ಪ್ರೊ| ಕೃಷ್ಣನ್‌ ಮತ್ತು ಅವರ ಸಂಗೀತ ನನಗೆ ಅತ್ಯದ್ಬುತ. ಅವರ ವ್ಯಕ್ತಿತ್ವ ಸಂಗೀತವನ್ನು ಪ್ರತಿಧ್ವನಿಸಿದರೆ, ಅವರ ಸಂಗೀತವು ವ್ಯಕ್ತಿತ್ವವನ್ನು ಪ್ರತಿಧ್ವನಿಸುತ್ತದೆ. ಜೀವನ ಮೌಲ್ಯ, ಕಲಾವಿದ ಹೇಗಿರಬೇಕು, ಹೀಗಿರಬಾರದು ಎಂಬುದನ್ನು ಕಲಿಕೆಯ ಭಾಗವಾಗಿ ಅವರಿಂದ ಸಿಕ್ಕಿದೆ.

Advertisement

ಹೊಸ ಪ್ರಯೋಗಗಳು ಹೇಗೆ ಸವಾಲಾಗುತ್ತಿವೆ?

ನಾವು ಕಲೆಯಲ್ಲಿ ಎಷ್ಟು ತೊಡಗಿಸಿಕೊಳ್ಳುತ್ತೇವೆ ಎನ್ನುವುದರ ಆಧಾರದಲ್ಲಿ ಅನುಭವ ಗಳಿಸಿದಂತೆ ನಮ್ಮದೇ ಒಂದು ಮಾರ್ಗ ಕಂಡುಕೊಳ್ಳುತ್ತೇವೆ. ಆದರೆ ಅದರಲ್ಲಿ ನಮ್ಮ ಪರಂಪರೆ ಇರುತ್ತದೆ. ಮೂಲ ಬಿಟ್ಟು ಬೆಳೆಯಲು ಸಾಧ್ಯವಿಲ್ಲ. ಹೊಸ ಸಂಪ್ರದಾಯ ಎಂದಾಕ್ಷಣ ಪರಂಪರೆಯನ್ನು ಬಿಟ್ಟು ಹೊಸದೇನೋ ಮಾಡುತ್ತೇವೆ ಎಂದರ್ಥವೂ ಅಲ್ಲ. ಮೂಲ ಪರಂಪರೆ, ಸಂಪ್ರದಾಯ, ಶಿಸ್ತಿಗೆ ಧಕ್ಕೆ ಆಗದಂತೆ ಕೆಲವು ಮಾರ್ಪಾಡುಗಳನ್ನು ಆಯಾ ಕಲಾವಿದನ ಅನುಭವ, ಸಾಮರ್ಥ್ಯದ ಆಧಾರದಲ್ಲಿ ಮಾಡಿಕೊಳ್ಳುತ್ತಾರೆ.

 ಎಲೆಕ್ಟ್ರಿಕಲ್‌ ಪಿಟೀಲು ನೀಡುತ್ತಿರುವ ಸವಾಲೇನು?

ಎಲೆಕ್ಟ್ರಿಕಲ್‌ ಪಿಟೀಲು ಎಂದಿಗೂ ಸಾಂಪ್ರದಾಯಿಕ ಪಿಟೀಲು ವಾದಕರಿಗೆ ಸವಾಲು ಆಗಲು ಸಾಧ್ಯವೇ ಇಲ್ಲ. ಶಬ್ದ ಇಷ್ಟಪಡುವವರು ಎಲೆಕ್ಟ್ರಿಕಲ್‌ ಪಿಟೀಲು ಬಳಸಬಹುದು. ಅದು ಅವರ ಇಚ್ಛೆ ಆದರೆ ಸಂಪ್ರದಾಯಬದ್ಧವಾಗಿ ಪಿಟೀಲು ಬಾರಿಸುವ ವರ್ಗವೇ ಬೇರೆ.

ಕೇಳುವ ಸಂಸ್ಕೃತಿ ಯುವ ಪೀಳಿಗೆಯಲ್ಲಿ ಕಡಿಮೆ ಆಗಿದೆ ಎನಿಸುತ್ತಿದೆಯೇ?

ಕೇಳುಗ ವರ್ಗ ಕಡಿಮೆಯಾಗಿಲ್ಲ. ಆದರೆ ಈಗಿನ ಜನರೇಶನ್‌ ಹಾಗೇ ಇರುವುದರಿಂದ ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಕೆಲವರಿಗೆ ವೀಡಿಯೋ ನೋಡುವುದೇ ಇಷ್ಟ ಮತ್ತು ವೀಡಿಯೋ ನೋಡಿ ಕಲಿಕೆ ಹುಟ್ಟಿನಿಂದಲೇ ಆರಂಭವಾಗುತ್ತದೆ. ಅದರಿಂದ ಸಾಂಪ್ರದಾಯಿಕ ಸಂಗೀತ ಪರಂಪರೆಗೆ ಏನೂ ಧಕ್ಕೆಯಾಗದು. ಯುವಜನತೆ ಹೆಚ್ಚೆಚ್ಚು ಆಸಕ್ತಿ ವಹಿಸಿಯೇ ಕಛೇರಿಗಳಿಗೆ ಬರುತ್ತಿದ್ದಾರೆ. ಅಭ್ಯಾಸ ಮಾಡುತ್ತಿದ್ದಾರೆ. ಅಂತಿಮವಾಗಿ ಸಂಗೀತದ ಆಯ್ಕೆ ಅವರವರ ಇಚ್ಛೆಯಂತೆ ಇರುವುದು.

ನಿಮ್ಮದು ಸಂಗೀತ ಕುಟುಂಬ. ಸಂಗೀತದ ಜತೆಗೆ ಕೌಟುಂಬಿಕ ಸಂವಾದ ಹೇಗಿರುತ್ತದೆ?

ಸಂಗೀತ ಕುಟುಂಬದ ಹಿನ್ನೆಲೆ ನಮಗೊಂದು ಅನು ಕೂಲವೂ ಹೌದು. ಇಡೀ ಕುಟುಂಬ ಸಂಗೀತದ ಕುಟುಂಬ ಆದ್ದರಿಂದ ಅನೇಕ ಅಂಶಗಳನ್ನು ನಾವು ಸಂಗೀತದ ಮೂಲಕವೇ ಸಂವಾದ ಮಾಡುತ್ತೇವೆ. ನನಗೆ ಮತ್ತು ಪತಿಗೆ ಶ್ರೇಷ್ಠ ಗುರುಗಳು ಸಿಕ್ಕಿದ್ದರಿಂದ ಅವರೊಂದಿಗೆ ಕಛೇರಿ ನೀಡಿದ್ದು ನಮಗೆ ಇನ್ನಷ್ಟು ಸಂಗೀತದ ಅನುಭುತಿ ನೀಡಿದೆ.

ನೀವು ಮತ್ತು ಪತಿ ಒಂದೇ ವೇದಿಕೆಯಲ್ಲಿ ಕಛೇರಿ ನೀಡುವಾಗ ಸಿದ್ಧತೆ, ಸಮನ್ವಯ ಹೇಗಿರುತ್ತದೆ?

ನಮ್ಮ ನಡುವೆ ಯಾವುದೇ ಪೂರ್ವಯೋಜಿತ ಸಿದ್ಧತೆ ಇರುವುದಿಲ್ಲ. ಕಾರ್ಯಕ್ರಮ ಆರಂಭ ಆದ ಅನಂತರದಲ್ಲಿನ ಕಣ್ಣು ಸನ್ನೆ, ಸಾಗುತ್ತಿರುವ ವೇಗದಲ್ಲಿ ಹಾಡುಗಳ ಆಯ್ಕೆ, ವೇದಿಕೆಯ ಮೇಲೆ ಹಲವು ಪ್ರಯೋಗಗಳನ್ನು ಸನ್ನೆಯಲ್ಲೇ ಮಾಡುತ್ತಿರುತ್ತೇವೆ. ಇದಕ್ಕಾಗಿ ವಿಶೇಷ ತಯಾರಿ ಏನೂ ಮಾಡಿಕೊಳ್ಳುವುದಿಲ್ಲ.

ಇಬ್ಬರ ಸಂಗೀತಾಭ್ಯಾಸ, ತಯಾರಿ ಹೇಗೆ?

ನಮ್ಮಿಬ್ಬರ ಸಂಗೀತಾಭ್ಯಾಸ, ತಯಾರಿ ಪೂರ್ಣವಾಗಿ ಪ್ರತ್ಯೇಕವಾಗಿಯೇ ಇರುತ್ತದೆ. ಎಂದೂ ನಾವು ಒಟ್ಟೊಟ್ಟಿಗೆ ಅಭ್ಯಾಸ ಮಾಡಿದವರಲ್ಲ. ಆದರೆ ಸಂಗೀತ ವಿದ್ವಾನರ ಬಗ್ಗೆ ಒಟ್ಟಿಗೆ ಕೂತು ಮಾತಾಡುತ್ತೇವೆ. ಒಟ್ಟಿಗೆ ಸಂಗೀತ ಕೇಳುತ್ತೇವೆ. ಸಂಗೀತದ ಬಗ್ಗೆ ಹೆಚ್ಚೆಚ್ಚು ಮಾತು, ಚರ್ಚೆ ಮಾಡುತ್ತೇವೆ.

ಉಡುಪಿ ಬಗ್ಗೆ ಏನೇನಿಸುತ್ತದೆ?:

ಉಡುಪಿ ತುಂಬ ಇಷ್ಟ. ಇಲ್ಲೊಂದು ಸಂಗೀತದ ಸಮ್ಮಿಶ್ರಣವಿದೆ. ಕರ್ಣಾಟಕ್‌ ಮತ್ತು ಹಿಂದುಸ್ಥಾನಿ ಸಂಗೀತಕ್ಕೆ ಸಮಾನ ಆದ್ಯತೆ ನೀಡಿದ ಭೂಮಿಯಿದು ಮತ್ತು ಆ ಪರಂಪರೆ ಇಂದಿಗೂ ಬೆಳೆದುಕೊಂಡು ಹೋಗುತ್ತಿದೆ ಎಂದು ನಂಬಿದ್ದೇನೆ.

-ರಾಜು ಖಾರ್ವಿ, ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next