Advertisement

ಸಕಲ ಸರಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಮಹಾಸ್ವಾಮಿಗಳ ಅಂತ್ಯಕ್ರಿಯೆ: ಸಿಎಂ

11:12 AM Mar 23, 2023 | Team Udayavani |

ಬೆಂಗಳೂರು: ಜಿನೈಕ್ಯರಾದ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ತೀವ್ರ ಸಂತಾಪ
“ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಅಪಾರ ಸಂಖ್ಯೆಯ ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಾಂತಾಪ

ಶ್ರವಣಬೆಳಗೊಳದ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಿಧಿವಶರಾದ ಸುದ್ದಿ ತಿಳಿದು ಅತೀವ ನೋವಾಯಿತು.ಧಾರ್ಮಿಕ ಚಟುವಟಿಕೆಗಳ ಜೊತೆ ಶಿಕ್ಷಣ, ಸಮಾಜ ಸುಧಾರಣೆಗಾಗಿ ದುಡಿಯುತ್ತಿದ್ದ ಶ್ರೀಗಳ ಅಗಲಿಕೆಯಿಂದ ಸಮಾಜ ಬಡವಾಗಿದೆ. ಶ್ರೀಗಳ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ದೇವರು ಕರುಣಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಸಾಂತಾಪ ಸೂಚಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸಂತಾಪ
ಶ್ರವಣಬೆಳಗೊಳದ ಶ್ರೀ ಜೈನಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಅಗಲಿದ ವಿಷಯ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಶ್ರೀ ಭಗವಾನ್ ಬಾಹುಬಲಿ ಅವರ ಶಾಂತಿ, ಅಹಿಂಸೆ, ಸಹನೆ ತತ್ವಗಳನ್ನು ಪಸರಿಸುತ್ತಾ ಜನರಲ್ಲಿ ಅರಿವಿನ ಬೆಳಕು ಮೂಡಿಸಿದ್ದ ಪರಮಪೂಜ್ಯರು ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದರು.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಮಠದ ಭಕ್ತರು, ನಾಡಿನ ಜನರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Advertisement

ಡಿ.ಕೆ. ಶಿವಕುಮಾರ್ ಸಂತಾಪ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.’ಸ್ವಸ್ಥಿ ಶ್ರಿ ಚಾರುಕೀರ್ತಿ ಎಂಬ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ದೇಶಾದ್ಯಂತ ಅಪಾರ ಭಕ್ತವರ್ಗವನ್ನು ಹೊಂದಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಗಿದೆ. ಪೂಜ್ಯರು ಧರ್ಮ ರಕ್ಷಣೆ, ಸಮಾಜ ಸೇವೆಗೆ ತಮ್ಮ ಜೀವನ ಅರ್ಪಿಸಿಕೊಂಡಿದ್ದರು.ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಭಕ್ತ ವೃಂದಕ್ಕೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶೋಕ ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next