ಮಂಗಳೂರು: ಕೆಕೆಎಂಎ ಕರ್ನಾಟಕ ಶಾಖೆಯ ವತಿಯಿಂದ ಕುವೈಟ್ ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮೊದಲ ಖಾಸಗಿ ವಿಮಾನ ಬರಲಿದೆ.
ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಇದರ ಕರ್ನಾಟಕಾ ಶಾಖೆಯ ವತಿಯಿಂದ ವಿಮಾನ ಕುವೈಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದೆ.
ಭಾರತೀಯ ಮೂಲದ ಇಂಡಿಗೋ ಸಂಸ್ಥೆಯ ವಿಮಾನವು 165 ಅನಿವಾಸಿ ಕನ್ನಡಿಗರನ್ನು ಹೊತ್ತು ತರಲಿದೆ. ಈ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ ಹಾಗೂ ತಾಯಿನಾಡಿನಲ್ಲಿ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿಯೊಬ್ಬ ಪ್ರಯಾಣಿಕರಿಗೂ ಕೆಕೆಎಂಎ ವತಿಯಿಂದ ಆಹಾರ ಮತ್ತು ಸುರಕ್ಷಿತಾ ಪೊಟ್ಟಣವನ್ನು ನೀಡಲಾಗುತ್ತದೆ. ಈ ವಿಮಾನ ಜೂ. 27ರಂದು ಬರಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಇಂದಿಗೆ ಮುಂದೂಡಲಾಗಿತ್ತು.
ಕೆ.ಕೆ.ಎಂ ಕರ್ನಾಟಕ ಶಾಖೆಯ ತಂಡದ ಸದಸ್ಯರ ಶ್ರಮದಿಂದ ಯಾವುದೇ ತೊಂದರೆ ಇಲ್ಲದೇ ಚಾರ್ಟಡ್ ವಿಮಾನದ ಬುಕ್ಕಿಂಗ್ ಹಣ ಸಂಗ್ರಹ ಮತ್ತು ಅವರ ಧಾಖಲೆಗಳ ಸಂಗ್ರಹಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಕೆಕೆಎಂಎ ಕರ್ನಾಟಕ ಅಧ್ಯಕ್ಷರಾದ ಎಸ್ ಎಂ ಮೊಹಮ್ಮದ ಅಝರ್ ತಿಳಿಸಿದ್ದಾರೆ
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಕೆಎಂಎ ಹೆಲ್ಪ್ ಡೆಸ್ಕ್ ತಂಡವೂ ನಿರಂತರ ಕಾರ್ಯ ನಿರ್ವಹಿಸಿದ್ದು, ಕುವೈಟ್ ನಲ್ಲಿ ಟಿಕೆಟ್ ಗೆ ನಗದು ಹಣ ಪಾವತಿಸುವ ಪ್ರಯಾಣಿಕರ ವಾಸಸ್ಥಳಕ್ಕೆ ಹೋಗಿ ಟಿಕೆಟ್ ಹಣವನ್ನು ಸಂಗ್ರಹಿಸಿದ್ದಾರೆ.