ಧಾರವಾಡ: ಹರ..ಹರ.ಹರ.. ಮಹಾದೇವ.. ಹರ.. ಹರ.ಹರ.. ಮಹಾದೇವ..ಅಡಕೇಶ್ವರ.. ಮಡಕೇಶ್ವರ.. ಉಳವಿ ಚನ್ನಬಸವೇಶ್ವರ ಹರ.. ಹರ..ಹರ..ಮಹಾದೇವ…! ಹೀಗೆ ಭಕ್ತರ ಹರ್ಷೋದ್ಗಾರಗಳ ನಡುವೆ ತ್ರಿಕಾಲ ಜ್ಞಾನಿ ಉಳವಿ ಚನ್ನಬಸವಣ್ಣ ಹಾಗೂ ಶರಣರು ನೆಲೆಸಿದ್ದ ನಗರದ ಚನ್ನಬಸವೇಶ್ವರ ಗುಡ್ಡದಲ್ಲಿರುವ ಶ್ರೀ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ಶ್ರಾವಣ ಮಾಸದ ಕೊನೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಂಜೆ 4:30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯದಿಂದ ಹೊರಟ ರಥ ಹಿಂದಿ ಪ್ರಚಾರ ಸಭಾ ವೃತ್ತದವರೆಗೂ ತಲುಪಿ ನಂತರ ಮತ್ತೆ ಉಳವಿ ಬಸವೇಶ್ವರ ದೇವಸ್ಥಾನಕ್ಕೆ ಮರಳಿತು. ಹೆಜ್ಜೆಮೇಳ, ವೀರಗಾಸೆ, ನಂದಿಕೋಲು ಕುಣಿತ ಮೆರವಣಿಗೆ ಚನ್ನಬಸವಣ್ಣನ ಜಾತ್ರೆಗೆ ಮೆರಗು ನೀಡಿದ್ದವು. ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ರಥದತ್ತ ಉತ್ತತ್ತಿ, ನಿಂಬೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ಅಧ್ಯಕ್ಷ ಸಣ್ಣಬಸಪ್ಪ ಪಟ್ಟಣಶೆಟ್ಟಿ, ಕಾರ್ಯಾಧ್ಯಕ್ಷ ಬಿ.ಸಿ.ತಾಯಪ್ಪನವರ, ಉಪಾಧ್ಯಕ್ಷರಾದ ಈರಬಸಪ್ಪ ಭಾವಿಕಟ್ಟಿ, ಗೌರವ ಕಾರ್ಯದರ್ಶಿ ಡಾ|ಬಿ.ಸಿ.ಪೂಜಾರ, ಧರ್ಮದರ್ಶಿಗಳಾದ ಪ್ರೊ|ಎಲ್.ಎಂ.ಹಿರೇಗೌಡರ, ಎಸ್.ಬಿ.ಪಾಗದ, ಎಸ್.ಎಸ್.ನಟೇಗಲ್ಲ, ವಾಯ್.ಎಸ್. ಕರಡಿಗುಡ್ಡ, ಬಿ.ಎಂ.ಹೂಗಾರ, ಡಾ| ಕೆ.ಎಂ. ಗೌಡರ, ಎಂ.ಸಿ.ಪಾಟೀಲ ಇದ್ದರು.
ಶ್ರಾವಣ ಸೋಮವಾರ: ಶ್ರಾವಣ ಕಡೆಯ ಸೋಮವಾರ ಪ್ರತಿವರ್ಷ ನಡೆಯುವ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಧಾರವಾಡ ನಿವಾಸಿಗಳು ಮಾತ್ರವಲ್ಲ ಸುತ್ತಮುತ್ತಲಿನ ಗ್ರಾಮಗಳ ರೈತರು, ವಿವಿಧ ಕಲಾ ತಂಡದವರು, ಜಾನಪದ ಕಲಾ ಮೇಳದವರು ಪಾಲ್ಗೊಳ್ಳುತ್ತಾರೆ. ಈ ವರ್ಷವೂ ಹಳ್ಳಿಗಳಿಂದ ಸಾಕಷ್ಟು ಜನರು ಭಾಗಿಯಾಗಿದ್ದರು. ಬಂದ ಭಕ್ತರಿಗೆ ದಾಸೋಹ ಪರಂಪರೆಯಂತೆ ಮಹಾಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಮಂಡಕ್ಕಿ, ಮಿರ್ಚಿ ಸವಿ: ಇಲ್ಲಿನ ಉಳವಿ ಜಾತ್ರೆಯ ವಿಶೇಷ ಎಂದರೆ ಚುರುಮುರಿ ಮತ್ತು ಮಿರ್ಚಿ. ಜಾತ್ರೆಗೆ ಬಂದಿದ್ದ ಎಲ್ಲ ಭಕ್ತರು ಇಲ್ಲಿ ಚುರುಮುರಿ ಮತ್ತು ಮಿರ್ಚಿ ತಿಂದು ಹೋಗುವುದುಂಟು. ಈ ವರ್ಷವೂ ದೇವಸ್ಥಾನದ ಮುಂಭಾಗದಲ್ಲೇ ಚುರುಮುರಿ ಮಾರಾಟ ಭರ್ಜರಿಯಾಗಿ ನಡೆದಿತ್ತು. ಈ ಬಾರಿಯ ಜಾತ್ರೆಯಲ್ಲಿ ಯುವತಿಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.