Advertisement
ದೇವಯಾನಿಯ ಸ್ವಗತ ಈ ಸಂದರ್ಭ ನಡೆದ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಭಾವಶಾಲಿಯಾಗಿ ಮೂಡಿಬಂದವು. ಮೊದಲನೆಯದಾದ
ಪ್ರೊ| ಉದ್ಯಾವರ ಮಾಧವ ಆಚಾರ್ಯ ರಚಿಸಿದ ಮತ್ತು ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸಿದ “ದೇವಯಾನಿಯ ಸ್ವಗತ’ ಎಂಬ ಏಕವ್ಯಕ್ತಿ ರೂಪಕ ಒಂದು ಅಪೂರ್ವ ಅನುಭವವನ್ನು ಪ್ರೇಕ್ಷಕರಿಗೆ ನೀಡಿತು. “ದೇವಯಾನಿಯ ಸ್ವಗತ’ ತಾನು ಒಳಗೊಂಡ ವಸ್ತು ಮತ್ತು ಸಂಗೀತ ನೃತ್ಯದ ಚೌಕಟ್ಟುಗಳಲ್ಲಿ ಕಲಾತ್ಮಕವಾಗಿ ಮೂಡಿಬಂದಿದೆ. ಭ್ರಮರಿ ಶಿವಪ್ರಕಾಶ್ ಅವರ ಪ್ರಬುದ್ಧ ಅಭಿನಯಕ್ಕೆ ಪೂರಕವಾಗಿ ಸಂಗೀತ ನೀಡಿದವರು ಶೀಲಾ ದಿವಾಕರ್ ಮತ್ತು ವಾಚಿಕವನ್ನು ಅಭಿವ್ಯಕ್ತಿಸಿದವರು ಸ್ಮಿತಾ ಶೆಣೈ. ಹಿನ್ನೆಲೆಯಲ್ಲಿ ರವಿಕುಮಾರ್ ಕೆ ಎಚ್(ಮೃದಂಗ), ವಿಶ್ವಾಸ್ ಕೃಷ್ಣ (ವಯೊಲಿನ್), ಮುರಳೀಧರ ಕೆ.(ಕೊಳಲು) ಹಾಗೂ ಕು| ಶ್ರೀಸನ್ನಿಧಿ ಶರ್ಮ(ನಟ್ಟುವಾಂಗ) ಸೂಕ್ತ ಸಹಕಾರವನ್ನು ನೀಡಿದ್ದಾರೆ. ಒಟ್ಟಿನಲ್ಲಿ “ದೇವಯಾನಿಯ ಸ್ವಗತ’ ಕಚನ ಭಾಗಕ್ಕೆ ಸೀಮಿತಗೊಂಡಿದ್ದರೂ ಅದ್ಭುತ ಗಾಢ ವಿಷಾದದ ಪ್ರಯೋಗವಾಗಿ ವರ್ತಮಾನದ ಸ್ತ್ರೀಪರ ತಲ್ಲಣಗಳಿಗೆ ಒಂದು ಹುಡುಕಾಟವಾಗಿ ಸಹೃದಯರನ್ನು ಮುಟ್ಟಿತೆಂದು ಹೇಳಬಹುದು. ಗುರುಪುತ್ರಿಯೆಂಬ ಬೇಲಿಯೊಳಗಿದ್ದುಕೊಂಡೇ ದೇವಯಾನಿಯ ಮನೋಲೋಕವನ್ನು ವಿವಿಧ ಆಯಾಮಗಳಲ್ಲಿ ಭ್ರಮರಿ ಶಿವಪ್ರಕಾಶ್ ಆಕರ್ಷಣೀಯವಾಗಿ ಅಭಿವ್ಯಕ್ತಿಸಿದ್ದಾರೆ.
ದಿನವಿಡೀ ನಡೆದ ಚಿಂತನ ಮಂಥನ ಕಾರ್ಯಕ್ರಮಕ್ಕೆ ಒಂದು ಕಲಶವಿಟ್ಟಂತೆ ನಡೆದ ರಂಗ ಪ್ರಯತ್ನವೇ “ದೇವಯಾನಿ-ಶರ್ಮಿಷ್ಠೆ’. ಸುಮಾರು 38 ವರ್ಷಗಳ ಹಿಂದೆ ರಚನೆಗೊಂಡ ಈ ಕಾವ್ಯ-ನಾಟಕ ತನ್ನ ಅಪಾರ ಧ್ವನಿಶಕ್ತಿಯಿಂದ ಸಹೃದಯರ ಸಂವೇದನೆಗೆ ಒಳಗಾಯಿತು. ನಾಡಿನ ಪ್ರಮುಖ ಸಾಹಿತಿಗಳಲ್ಲಿ ಓರ್ವರಾದ ಕಥೆಗಾರ ಕವಿ ಚಿಂತಕ ಗೋಪಾಲ ಬಿ. ಶೆಟ್ಟಿ ಅವರ ಈ ಕೃತಿ ಮುಖ್ಯವಾಗಿ ವಿವಿಧ ಪಾತ್ರಗಳ ತುಮುಲಗಳನ್ನು ಕಾವ್ಯಾತ್ಮಕವಾಗಿ ನೀಡುತ್ತದೆ. ಮನುಷ್ಯ ಸಂಬಂಧಗಳ ಸೂಕ್ಷ್ಮಗಳನ್ನು ಸಂಕೀರ್ಣವಾಗಿ ಪ್ರೇಕ್ಷಕರ ಮುಂದೆ ಇಡುವ ನಾಟಕ ಕೃತಿ ಇದು. ಶುಕ್ರಾಚಾರ್ಯ(ಭವಾನಿಶಂಕರ್ ಕೆ.), ದೇವಯಾನಿ (ಭಾಗೀರಥಿ ಎಂ. ರಾವ್) , ಶರ್ಮಿಷ್ಠೆ (ನಾಗರತ್ನ ಹೇಳೆì), ಯಯಾತಿ (ವಿವೇಕಾನಂದ ಪಾಂಗಣ್ಣಾಯ), ವೃಷಪರ್ವ-ಪುರು(ರಾಜೇಶ್ ಭಟ್ ಪಿ.) ಈ ಪಾತ್ರಧಾರಿಗಳು ನಾಟಕದ ಪ್ರಮುಖ ಪಾತ್ರಗಳ ಸಂಬಂಧದ ಒಳಸುಳಿಗಳನ್ನು ಚೆನ್ನಾಗಿ ಬಿಂಬಿಸಿ¨ªಾರೆ. ಲಲಿತ ರಗಳೆಯ ಚೌಕಟ್ಟಿನಲ್ಲಿ ಕಾವ್ಯಾತ್ಮಕವಾಗಿ ಅಕ್ಷರ ರೂಪವನ್ನು ಪಡೆದ ಕೃತಿಯನ್ನು ನಿರ್ದೇಶಕರು(ಉದ್ಯಾವರ ಮಾಧವ ಆಚಾರ್ಯ) ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಸಂಗೀತದ ಹಿನ್ನಲೆಯನ್ನು ನೀಡಿದ ವಿನುತಾ ಆಚಾರ್ಯ(ಸಹಗಾಯನ: ಶಶಿಪ್ರಭಾ ಕಾರಂತ್ , ಅನಿರುದ್ಧ ಭಟ್), ಮೃದಂಗದಲ್ಲಿ ರಾಮಚಂದ್ರ ಪಾಂಗಣ್ಣಾಯ ಮತ್ತು ನಟ್ಟುವಾಂಗದಲ್ಲಿ ರಾಮಕೃಷ್ಣ ಕೊಡಂಚ ಶ್ಲಾಘನೆಗೆ ಅರ್ಹರು. ಒಟ್ಟಿನಲ್ಲಿ ಈ ನಾಟಕ ಶರ್ಮಿಷ್ಠೆಯ ತುಮುಲದ ಮೂಲಕ ಸ್ತ್ರೀಪರ ಮೌಲ್ಯವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಶರ್ಮಿಷ್ಠೆಯ ಮಗ ಅಪ್ಪನ ಮುದಿತನವನ್ನು ಸ್ವೀಕರಿಸಿದಾಗ ತಾಯಿಯಾದ ಶರ್ಮಿಷ್ಠೆಯ ಸಂಘರ್ಷ ಹೊಸ ಎತ್ತರವನ್ನು ಮುಟ್ಟುತ್ತದೆ. ಮಗನನ್ನು ಮಗನಾಗಿ ಮಮತೆ ತೋರಿಸಲಾಗದ ಸ್ಥಿತಿ ಒಂದೆಡೆಯಾದರೆ, ಮಗನ ಯೌವನ ಮಡೆದ ಯಯಾತಿಯನ್ನು ಗಂಡನಾಗಿ ಸ್ವೀಕರಿಸಲಾಗದ ಸ್ಥಿತಿ ಇನ್ನೊಂಡೆಡೆ. ಹೀಗೆ ವಂಶವೃಕ್ಷ ತಿರುಗಿ ನಿಂತ ಯಾತನೆಯ ಅನುಭವದೊಂದಿಗೆ ಈ ರಂಗ ಪ್ರಯತ್ನ ಶರ್ಮಿಷ್ಠೆಯ ಮೂಲಕ ಮಾನವೀಯ ಸಂಘರ್ಷದ ಮೌಲ್ಯವನ್ನು ಕಟ್ಟುವ ಕೆಲಸವನ್ನು ನಡೆಸುತ್ತದೆ. ಪ್ರೀತಿ ಮತ್ತು ದ್ವೇಷದ ಮುಖಾಮುಖೀಯನ್ನು ಹಾಗೂ ಆತ್ಮದ ಕುರಿತಾದ ಪ್ರಶ್ನೆಯನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಕಾಡುವ ಪ್ರಶ್ನೆಗಳನ್ನಾಗಿಸುತ್ತದೆ. ತಾತ್ತಿಕವಾಗಿ ಇಂಥ ಪ್ರಶ್ನೆಗಳು ನಾಟಕದ ಕೊನೆಯಲ್ಲಿ ಪೊರೆ ಕಳಚಿಕೊಳ್ಳುತ್ತ ನಮ್ಮ ಜಿಜ್ಞಾಸೆಗೆ ಕಾರಣವಾಗುವುದು ಈ ಕೃತಿಯ ಮತ್ತು ರಂಗಪ್ರಯೋಗದ ವೈಶಿಷ್ಟ್ಯ. ಕೆ. ತಾರಾ ಭಟ್