ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಶಂಕಿತ ಸರಗಳ್ಳನೊಬ್ಬ ಧರ್ಮಸ್ಥಳ ಠಾಣೆಯ ಪೊಲೀಸ್ ಸಿಬಂದಿಯೊಬ್ಬರ ಮೇಲೆ ಮಂಗಳವಾರ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಬಣಕಲ್ ಠಾಣೆ ವ್ಯಾಪ್ತಿ ಯಲ್ಲಿ ಇಬ್ಬರು ಕಳ್ಳರು ಸರವನ್ನು ಕದ್ದು ಚಾರ್ಮಾಡಿ ಕಡೆಗೆ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಈ ಮಾಹಿತಿಯ ಮೇರೆಗೆ ಪೊಲೀಸರು ಚಾರ್ಮಾಡಿ ಚೆಕ್‌ಪೋಸ್ಟಿನಲ್ಲಿ ಹೊಂಚು ಹಾಕಿ ಕಾಯುತ್ತಿದ್ದರು. ಚಾರ್ಮಾಡಿ ಚೆಕ್ ಪೋಸ್ಟಿನಲ್ಲಿ ಧರ್ಮಸ್ಥಳ ಠಾಣೆಯ ಇಬ್ಬರು ಸಿಬಂದಿ ಹಾಗೂ ಇಬ್ಬರು ಹೋಮ್ ಗಾರ್ಡ್ ಗಳನ್ನು ನೇಮಿಸಲಾಗಿತ್ತು.
ಸಿಬಂದಿ ಈ ಮಾರ್ಗವಾಗಿ ಹಾದುಹೋಗುವ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಸಂಜೆ ಸುಮಾರು 4 ಗಂಟೆಗೆ ಬಜಾಜ್ ಬೈಕೊಂದರ ಆಗಮನವಾಯಿತು. ಅದರಲ್ಲಿ ಇಬ್ಬರು ಸವಾರರು ಇದ್ದರು. ತಪಾಸಣೆ ನಡೆಸುವುದಕ್ಕಾಗಿ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರಾದರೂ ಸವಾರರು ಅದನ್ನು ಧಿಕ್ಕರಿಸಿ ವಾಹನ ಮುಂದಕ್ಕೆ ಚಲಾಯಿಸಲು ಪ್ರಯತ್ನಿಸಿದರು.
ಆಗ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬಂದಿ ಜಾವೇದ್ ಪಟೇಲ್ ಅವರು ಒಬ್ಬನನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದರು.
ಆದರೆ ಆಗ ಬೈಕಿನಲ್ಲಿದ್ದ ಇನ್ನೊಬ್ಬ ಸವಾರನೂ ಸೇರಿಕೊಂಡು ಪೊಲೀಸ್ ಸಿಬಂದಿ ಜಾವೇದ್ ಅವರ ಹೊಟ್ಟೆ, ಕೈ, ಕಾಲುಗಳಿಗೆ ಕೈಗಳಿಂದ ಗುದ್ದಿ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಕರ್ತವ್ಯದಲ್ಲಿದ್ದ ಇನ್ನುಳಿದ ಅರಣ್ಯ ಇಲಾಖೆ ಸಿಬಂದಿ ಹಾಗೂ ಹೋಮ್ ಗಾರ್ಡ್‌ಗಳು ಅಲ್ಲಿಗೆ ಬಂದು ತಲುಪಿದ್ದಾರೆ.
ಆದರೆ ಅಷ್ಟರಲ್ಲಿ ಒಬ್ಬ ಆರೋಪಿ ಪರಾರಿ ಯಾಗಿದ್ದು, ಹಾಸನ ಮೂಲದ ಇನ್ನೊಬ್ಬನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಯಾಳು ಪೊಲೀಸ್ ಜಾವೇದ್ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.