Advertisement

ಚಾರ್ಮಾಡಿ: ಆಯ ತಪ್ಪಿದರೆ ಕಾದಿದೆ ಅಪಾಯ

10:33 AM Jun 11, 2019 | keerthan |

ಬೆಳ್ತಂಗಡಿ: ಕಗ್ಗತ್ತಲ ರಾತ್ರಿ ಸುರಿದ ಭೀಕರ ಮಳೆ. ರಸ್ತೆಯ ಅಂಚಿಗೆ ಜರಿದು ಬಿದ್ದ ಬೆಟ್ಟ. ಕಿರಿದಾದ ರಸ್ತೆಯಲ್ಲಿ ಸಾಲುಗಟ್ಟಿ ನಿಂತ‌ ವಾಹನ. ನಿರ್ಜನ ಪ್ರದೇಶದಲ್ಲಿ ಸಾವಿರಾರು ಮಂದಿ ಆಹಾರ -ನೀರು ಇಲ್ಲದೆ ಸತತ 18 ಗಂಟೆ ಕಾಲ ಕಳೆದ ಮಂದಿ. ಇದು ಕಳೆದ ವರ್ಷದ ಜೂ. 12ರ ಇರುಳು ಚಾರ್ಮಾಡಿ ಘಾಟಿ ರಸ್ತೆಯ ಚಿತ್ರಣ.

Advertisement

ಇಂತಹ ಕಠಿನ ಪರಿಸ್ಥಿತಿ ಈ ಮಳೆಗಾಲದಲ್ಲೂ ಎದುರಾಗಬಹುದೇ ಅಥವಾ ಸುಧಾರಣೆಯಾಗಿದೆಯೇ ಎಂದು ಪರಿಶೀಲಿಸಿದರೆ ಉತ್ತರ ನಿರಾಶಾ ದಾಯಕವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಸ್ತೆಗಳ ಅಂಚು ವಿಸ್ತರಣೆಯಾಗಿರುವುದು ಬಿಟ್ಟರೆ 6, 7ನೇ ತಿರುವುಗಳಲ್ಲಿ ಜರಿದ ಬೆಟ್ಟ ಸಾಲು ಇಂದಿಗೂ ಭಯ ಹುಟ್ಟಿಸುತ್ತದೆ. ದುರಂತ ಸಂಭವಿಸಿ ಒಂದು ವರ್ಷವಾದರೂ ಮಣ್ಣು ತೆರವು ಆಗಿಲ್ಲ.

ಸಾಯಿಲ್‌ ನೈಲಿಂಗ್‌ ಆಗಬೇಕಿತ್ತು
ಇಳಿಜಾರು ರಸ್ತೆಗೆ ಬದಿಯ ಬರೆ ಜರಿಯುವುದನ್ನು ಪ್ರತಿಬಂಧಿಸಲು ಸಾಯಿಲ್‌ ನೈಲಿಂಗ್‌ ರಚನೆಯಂತಹ ಅತ್ಯದ್ಭುತ ತಂತ್ರಜ್ಞಾನವಿದೆ. ಗೋಡೆ ಕೊರೆದು ಕಬ್ಬಣ ಅಥವಾ ಉಕ್ಕಿನ ರಾಡ್‌ ಅಳವಡಿಸಿ ಕಾಂಕ್ರೀಟ್‌ ಲೇಪಿತ ಪದರ ನಿರ್ಮಿಸಿದರೆ ಗುಡ್ಡ ಜರಿತ ತಪ್ಪಿಸಬಹುದು. ಆ ಮಾದರಿಯನ್ನು
ಅಳವಡಿಸಿದಲ್ಲಿ ಮಣ್ಣಿನ ಸವಕಳಿ ತಡೆಗಟ್ಟಬಹುದು ಎಂಬುದು ತಜ್ಞರ ಅಭಿಪ್ರಾಯ.

ದಾರಿದೀಪ/ ನೆಟ್‌ವರ್ಕ್‌ ಇಲ್ಲ
ದುರ್ಗಮ ರಸ್ತೆ ಸಂಚಾರದ ನಡುವೆ ವಾಹನ ಕೆಟ್ಟು ನಿಂತರೆ, ಅಪಾಯ-ಅವಘಡಗಳಾದರೆ ದೇವರಿಗೆ ಪ್ರೀತಿ. ಸೂಕ್ತ ದಾರಿ ದೀಪದ ಕೊರತೆಯಿಂದ ಕತ್ತಲ ಕೂಪದಲ್ಲೇ ಕಳೆಯುವ ಪರಿಸ್ಥಿತಿ ಇದೆ. ಸೋಲಾರ್‌ ದೀಪ ಅಳವಡಿಸುವ ಭರವಸೆ ನನೆಗುದಿಗೆ ಬಿದ್ದಿದೆ. ಅಪಾಯ ಸಂಭವಿಸಿದರೆ ಮಾತ್ರ ಎಚ್ಚೆತ್ತು ಕೊಳ್ಳುವ ಪರಿಸ್ಥಿತಿ ಸರಕಾರದ್ದು ಎಂಬಂತಾಗಿದೆ. ತುರ್ತು ಸಂದರ್ಭ ದೂರವಾಣಿ ಕರೆಗೆ ಮೊಬೈಲ್‌ ನೆಟ್‌ವರ್ಕ್‌ ಇಲ್ಲ. ಚಾರ್ಮಾಡಿ ಚೆಕ್‌ಪೋಸ್ಟ್‌ ಕಳೆದು ಅಣ್ಣಪ್ಪ ಬೆಟ್ಟ ತಲುಪುವ ಮಧ್ಯ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇಂದು ನಿನ್ನೆಯದಲ್ಲ.

75 ಲಕ್ಷ ರೂ.ಗಳಲ್ಲಿ ಚರಂಡಿ ದುರಸ್ತಿ
ರಾಜ್ಯ ಹೆದ್ದಾರಿ ಇಲಾಖೆ 11 ತಿರುವುಗಳ ಇಕ್ಕೆಲಗಳಲ್ಲಿ ಸುಮಾರು 75 ಲಕ್ಷ ರೂ. ಅನುದಾನದಲ್ಲಿ ರಸ್ತೆ ಎರಡೂ ಬದಿ ಚರಂಡಿ ದುರಸ್ತಿ ಮತ್ತು ಮೋರಿಗಳ ಹೂಳೆತ್ತುವ ಕೆಲಸ ಮಾಡಿದೆ. ಒಂದು ಮಳೆಗೆ ಕೆಲವೆಡೆ ರಸ್ತೆಯಲ್ಲೇ ನೀರು ಹರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಳೆಗಾಲ ಪೂರ್ವ ಸಿದ್ಧತೆ ಕುರಿತು ಹಲವು ಸುತ್ತಿನ ಅಧಿಕಾರಿಗಳ ಸಭೆ ಕರೆಯಲಾಗಿದೆ. ಜೆಸಿಬಿ ಮಾಲಕರೊಂದಿಗೆ ಸೋಮವಾರ ಸಭೆ ಕರೆದು ಸಮಾಜಮುಖೀ ಕೆಲಸಕ್ಕೆ ಕೈಜೋಡಿಸುವಂತೆ ವಿನಂತಿಸಿದ್ದೇನೆ. ಶೀಘ್ರದಲ್ಲೇ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗುವುದು.
ಹರೀಶ್‌ ಪೂಂಜ, ಶಾಸಕ

75 ಲಕ್ಷ ರೂ. ಅನುದಾನದಲ್ಲಿ ಚಾರ್ಮಾಡಿ ಘಾಟಿ ರಸ್ತೆ ಅಂಚಿನ ಚರಂಡಿ ಹೂಳೆತ್ತುವ ಕೆಲಸ ಮಾಡಲಾಗಿದೆ. 11 ತಿರುವು ರಸ್ತೆಗಳ ಬದಿ ವಿಸ್ತರಿಸಲಾಗಿದೆ. ಸೂಚನಾ ಫಲಕ, ದಾರಿ ದೀಪ ಸೇರಿದಂತೆ ರಸ್ತೆ ಅಭಿವೃದ್ಧಿ ಕುರಿತು ಡಿಪಿಆರ್‌ ಸಿದ್ಧಪಡಿಸಿ ವರದಿ ನೀಡಲಾಗಿದೆ.
– ರಮೇಶ್‌, ಸ. ಕಾರ್ಯಪಾಲಕ ಎಂಜಿನಿಯರ್‌ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂ ರು

ಚರಂಡಿ ದುರಸ್ತಿಯಾಗಿ ಉತ್ತಮ ಕೆಲಸವಾಗಿದೆ. ಆದರೆ ಕಳೆದ ಬಾರಿ ಮರಳಿನ ಚೀಲಗಳನ್ನು ಪೇರಿಸಿ 7, 5, 4ನೇ ತಿರುವುಗಳನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಈ ಬಾರಿಯ ಮಳೆಗೆ ನೀರಿನ ಒತ್ತಡ ಹೆಚ್ಚಾಗಿ ಕಳೆದ ಬಾರಿಗಿಂತ ದುರ್ಗಮವಾಗುವ ಎಲ್ಲ ಸಾಧ್ಯತೆಗಳಿವೆ.
ಹಸನಬ್ಬ, ಚಾರ್ಮಾಡಿ ನಿವಾಸಿ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next