Advertisement
ಶಿಕ್ಷಕರ ದಿನಾಚರಣೆಯ ಸಂಭ್ರಮದಲ್ಲಿದ್ದ ಮಕ್ಕಳು ಎಂದಿನಂತೆ ಶಾಲಾ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ತೆರನಾದ ದುರ್ಘಟನೆ ಸಂಭವಿಸಿ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುವಂತಾದುದು ತೀರಾ ದುರದೃಷ್ಟಕರ. ರಸ್ತೆಯಲ್ಲಿನ ಹೊಂಡ ತಪ್ಪಿಸುವ ಭರದಲ್ಲಿ ಬಸ್ ಚಾಲಕ ಎಸಗಿದ ಸಣ್ಣ ಎಡವಟ್ಟು ಇಬ್ಬರು ಎಳೆಯ ಕಂದಮ್ಮಗಳ ಪ್ರಾಣಕ್ಕೇ ಕುತ್ತು ತಂದಿದೆ. ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Related Articles
Advertisement
ಶಾಲಾ ವಾಹನಗಳನ್ನು ಚಲಾಯಿಸುವ ಚಾಲಕರು ಕೂಡ ಇತರ ವಾಹನಗಳಂತೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸುವ ಚಾಳಿಯಿಂದ ದೂರವುಳಿಯಬೇಕು. ಪುಟ್ಟ ಮಕ್ಕಳನ್ನು ಶಾಲೆಗೆ ಕರೆ ದೊಯ್ಯುವ ಮತ್ತು ಮರಳಿ ಮನೆಗೆ ಸುರಕ್ಷಿತವಾಗಿ ಕರೆತರುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಮೊದಲು ಈ ಚಾಲಕರು ಅರಿತುಕೊಳ್ಳಬೇಕು.
ಪ್ರತಿನಿತ್ಯ ಇದೇ ಕಾರ್ಯವನ್ನು ಮಾಡುವ ಈ ಚಾಲಕರಿಗೆ ತಾವು ವಾಹನ ಚಲಾಯಿಸುವ ರಸ್ತೆಯ ಸ್ಥಿತಿಗತಿಯ ಸಂಪೂರ್ಣ ಅರಿವು ಇದ್ದೇ ಇರುತ್ತದೆ. ಹೀಗಿದ್ದೂ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂದರೆ ಚಾಲಕರ ನಿರ್ಲಕ್ಯ ಎದ್ದು ತೋರುತ್ತದೆ. ಇನ್ನು ಮುಖ್ಯ ರಸ್ತೆಗೋ ಹೆದ್ದಾರಿಗೋ ಸೇರುವ ಜಾಗದಲ್ಲಿ ವಾಹನ ಚಾಲಕರು ಹೆಚ್ಚಿನ ತಾಳ್ಮೆ, ಸಂಯಮ ವಹಿಸುವುದು ಅತ್ಯಗತ್ಯ.
ಸಂಚಾರ ನಿಯಾಮಾವಳಿ ಪಾಲನೆ ವಿಷಯದಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ತಪಾಸಣೆ ಕಾರ್ಯ ನಡೆಸಬೇಕು. ಕಾನೂನು, ನಿಯಮಾವಳಿಗಳು ಕೇವಲ ಕಡತಗಳಿಗೆ ಸೀಮಿತವಾಗದೆ ಪ್ರತಿನಿತ್ಯ ಇವುಗಳ ಪಾಲನೆಯಾಗುವುದನ್ನು ಖಾತರಿಪಡಿಸುವ ಹೊಣೆಗಾರಿಕೆ ಈ ಇಲಾಖೆಗಳ ದ್ದಾಗಿದೆ. ಇದೇ ವೇಳೆ ಶಿಕ್ಷಣ ಸಂಸ್ಥೆಗಳು ಕೂಡ ಶಾಲಾ ವಾಹನಗಳಿಗೆ ಚಾಲಕರನ್ನು ನೇಮಿಸುವಾಗ ಸೂಕ್ತ ಪರಿಶೀಲನೆ ನಡೆಸಬೇಕು.
ಬೇಕಾಬಿಟ್ಟಿಯಾಗಿ ಚಾಲಕರನ್ನು ನೇಮಿಸಿಕೊಳ್ಳದೆ ನಿಗದಿತ ಅವಧಿಯ ಅನುಭವವುಳ್ಳ ಮತ್ತು ಚಾಲಕರ ಪೂರ್ವಾಪರಗಳನ್ನು ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು. ಇವೆಲ್ಲದರತ್ತ ಸಂಬಂಧಿತರು ಲಕ್ಷ್ಯ ಹರಿಸಿದಲ್ಲಿ ಮಾತ್ರವೇ ಮಾನ್ವಿಯಲ್ಲಿ ಸಂಭವಿಸಿದಂತಹ ದುರಂತಗಳನ್ನು ತಪ್ಪಿಸಬಹುದು.