ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಹಲವು ಕಡೆ ರಸ್ತೆ ಬದಿ ಕಟ್ಟಿರುವ ತಡೆಗೋಡೆ ಸಹಿತ ಮಣ್ಣು ತುಂಬಿಸಿ ಅಗಲಗೊಳಿಸಿದ ಸ್ಥಳಗಳಲ್ಲಿ ಬಿರುಕು ಬಿಟ್ಟಿದ್ದು, ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ.
ಕಳೆದ ಬೇಸಗೆ ಕಾಲದಲ್ಲಿ ಚಾರ್ಮಾಡಿ ಘಾಟಿ ಪರಿಸರದಲ್ಲಿ ಕಟ್ಟುತ್ತಿದ್ದ ತಡೆ ಗೋಡೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ತಡೆಗೋಡೆ ಕಟ್ಟಿರುವ 6ರಿಂದ 7 ಸ್ಥಳಗಳಲ್ಲಿ ಗೋಡೆಯ ಬದಿ ಹಾಕಿರುವ ಮಣ್ಣು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಗೋಡೆ ವಾಲುವ ಹಂತದಲ್ಲಿದೆ. ಜತೆಗೆ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾರಿ ಘಾಟಿ ಪ್ರದೇಶ ದಲ್ಲಿ ಹಲವು ವರ್ಷಗಳಿಂದ ನಡೆಯು ತ್ತಿದ್ದು, ಮಳೆಗಾಲ ಆರಂಭವಾದಾಗಲೇ ಘಾಟಿಯ ಪರಿಸ್ಥಿತಿ ಆತಂಕ ಮೂಡಿಸು ವಂತಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಿದಾಗ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳುವ ಸಾಧ್ಯತೆ ಇದೆ.
ತಡೆಗೋಡೆ ಪ್ರದೇಶದಲ್ಲಿ ಚರಂಡಿ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ತಡೆಗೋಡೆಗಳ ಸಮೀಪದಿಂದಲೇ ಕಣಿವೆ ಭಾಗಕ್ಕೆ ಇಳಿಯುತ್ತಿದೆ. ಹಿಂಬದಿಯಲ್ಲಿ ಕಟ್ಟಿರುವ ಗೋಡೆ ಮೂಲಕ ಕಣಿವೆ ಪ್ರದೇಶಕ್ಕೆ ಹರಿದು ಗೋಡೆಯ ಮಣ್ಣು ಕರಗುತ್ತಿದೆ. ಇಲ್ಲಿ ಕೆಲವೆಡೆ ಮರಳಿನ ಚೀಲ ಹಾಗೂಟಾರ್ಪಾಲು ಹೊದಿಸಿದ್ದರೂ ಅದು ಹೆಚ್ಚಿನ ರಕ್ಷಣೆ ನೀಡಲು ವಿಫಲವಾಗಿದೆ.
ರಾತ್ರಿ ಅಪಾಯ ಹೆಚ್ಚು
ಘಾಟಿಯಲ್ಲಿ ಸದ್ಯ ಮಳೆ ಮತ್ತು ಮಂಜು ಮುಸುಕಿದ ವಾತಾವರಣ ವಿದ್ದು, ರಾತ್ರಿ ಸಂಚರಿಸುವಾಗ ಹೆಚ್ಚಿನ ಎಚ್ಚರ ಅಗತ್ಯ. ಬಿರುಕು ಬಿಟ್ಟಿರುವ ತಡೆ ಗೋಡೆ ಹಾಗೂ ರಸ್ತೆ ಒಡೆದಿರುವುದು ರಾತ್ರಿ ಬೇಗನೆ ಗಮನಕ್ಕೆ ಬರಲು ಸಾಧ್ಯ ವಿಲ್ಲ. ಜಲಪಾತ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಘಾಟಿಯ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿದೆ. ನೀರಿನ ರಭಸಕ್ಕೆ ಮಣ್ಣು ಇನ್ನಷ್ಟು ಕರಗುವ ಸಾಧ್ಯತೆ ಇದೆ. ಆದ್ದರಿಂದ ಘಾಟಿ ಪ್ರದೇಶದಲ್ಲಿ ಸಂಚರಿಸುವಾಗ ಹೆಚ್ಚು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.