Advertisement

ಅಪಾಯದ ಹಾದಿಯಲ್ಲಿ ಅಪಘಾತಕ್ಕೆ ಆಹ್ವಾನ: ಚಾರ್ಮಾಡಿ ಹೆದ್ದಾರಿ ಬದಿಯಲ್ಲಿ ತಳ್ಳುಗಾಡಿಗಳ ಠಿಕಾಣಿ

11:43 PM Jul 16, 2023 | Team Udayavani |

ಬೆಳ್ತಂಗಡಿ: ಮಂಜು ಮುಸುಕಿದ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿ ಹಾದಿಯಲ್ಲಿ ವಾಹನ ಸವಾರರು ಸಾಹಸಮಯವಾಗಿ ವಾಹನ ಚಾಲನೆ ಮಾಡುವ ಮಧ್ಯೆ ಇದೀಗ ಅಲ್ಲಲ್ಲಿ ಟೆಂಟ್‌ನಂತೆ ತಳ್ಳುಗಾಡಿಗಳಲ್ಲಿ ವ್ಯಾಪಾರ ಆರಂಭಿಸಿರುವುದು ಮತ್ತಷ್ಟು ಅಪಘಾತಕ್ಕೆ ದಾರಿ ಮಾಡಿ ಕೊಡುವಂತಾಗಿದೆ.

Advertisement

ಚಾರ್ಮಾಡಿಯಲ್ಲಿ ವಾಹನ ಚಾಲನೆ ಅಪಾಯಕಾರಿಯಾಗಿದ್ದು, ಈಗಾಗಲೇ ಪ್ರತಿದಿನವೂ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತಿವೆ. ಕಳೆದ ಎರಡು ವಾರಗಳಲ್ಲಿ ಸಾರಿಗೆ ಬಸ್‌ಗಳು, ಸರಕು ಸಾಗಾಟದ ವಾಹನಗಳು ಪಲ್ಟಿಯಾಗಿವೆ. ಅದಕ್ಕಾಗಿ ಹೆದ್ದಾರಿ ಇಲಾಖೆಯು ಜಾರುವ ರಸ್ತೆಗೆ ಜೆಸಿಬಿ ಮೂಲಕ ಅಲ್ಲಲ್ಲಿ ಬರೆ ಎಳೆಯುವ ಮೂಲಕ ಒರಟು ಮಾಡಿದೆ. ಈ ಮಧ್ಯೆ ಇದೀಗ ಬೆಳ್ತಂಗಡಿ ಹಾಗೂ ಚಿಕ್ಕಮಗಳೂರು ಗಡಿ ಭಾಗದಲ್ಲಿ ತಳ್ಳು ಗಾಡಿಗಳನ್ನಿರಿಸಿ ಸಣ್ಣಪುಟ್ಟ ವ್ಯಾಪಾರ ಆರಂಭಿಸಿರುವುದು ಕಂಡುಬಂದಿದೆ.

ಅಪಘಾತಕ್ಕೆ ಆಹ್ವಾನ
ರಾಷ್ಟ್ರೀಯ ಹೆದ್ದಾರಿ ಬದಿ ಯಾವುದೇ ಈರೀತಿ ಮಾರಾಟ ನಿಷೇಧವಾಗಿದೆ. ಅದರಲ್ಲೂ ರಸ್ತೆ ಅಂಚಿನಲ್ಲೇ ಈ ರೀತಿ ಜೋಳ, ಸೋಡಾ ಶರಬತ್ತು ಸಹಿತ ಇತರ ವಸ್ತುಗಳನಿಟ್ಟು ಮಾರುವುದು ಕಂಡುಬಂದಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುವವರು ಇದರ ಖರೀದಿಗೆ ಮುಗಿಬೀಳುತ್ತಾರೆ. ಪರಿಣಾಮ ಮೊದಲೇ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಲಿದೆ. ಇದಕ್ಕೂ ಹೆಚ್ಚಾಗಿ ಮಂಜು ಮುಸುಕಿದ ಹಾದಿಯಲ್ಲಿ
ರಸ್ತೆ ಬದಿ ದಾಟುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಇದೇ ರೀತಿ ಈ ಹಿಂದೆ ಧರ್ಮಸ್ಥಳ ಕೊಕ್ಕಡ-ಸುಬ್ರಹ್ಮಣ್ಯ ರಸ್ತೆಯಲ್ಲೂ ತಾತ್ಕಾಲಿಕವಾಗಿ ಚಪ್ಪರ ಅಳವಡಿಸಿ ಹಣ್ಣು-ತಿಂಡಿ ತಿನಿಸು ಮಾರಾಟ ನಡೆಸುತ್ತಿದ್ದರು. ಪ್ರವಾಸಿಗರು ವಾಹನ ನಿಲ್ಲಿಸಿ ರಸ್ತೆ ದಾಟುವಾಗ ಬಸ್‌ನಡಿ ಸಿಲುಕಿ ಜೀವ ಕಳೆದುಕೊಂಡ ಘಟನೆ ಸಂಭವಿಸಿತ್ತು. ಬಳಿಕ ಹಿಂದಿನ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಂಗಡಿ ಮುಂಗಟ್ಟು ತೆರವುಗೊಳಿಸಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ತಲೆದೋರಿದೆ.

ಮಂಜುಮುಸುಕಿದ ವಾತಾವರಣ
ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ಬಹಳಷ್ಟು ಮಂಜು ಕವಿದ ವಾತಾವರಣವಿರುತ್ತದೆ. ಮಳೆ ಸುರಿದರೆ ಎದುರು ಬದಿಯಿಂದ ಬರುವ ವಾಹನ ಗೋಚರಿಸದಷ್ಟು ಮಂಜು ಕವಿದಿರುತ್ತದೆ. ಹೆಚ್ಚಿನ ತಿರುವು ರಸ್ತೆಯಾಗಿರುವುದರಿಂದ ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ. ಅತೀ ವೇಗ ಅಪಘಾತಕ್ಕೆ ಕಾರಣವಾಗಲಿದೆ. ರಾತ್ರಿ ಸಮಯದಲ್ಲಿ ಪ್ರಯಾಣ ಬೆಳೆಸುವವರು ಮುಂಜಾನೆಯ ಪ್ರಯಾಣಕ್ಕೆ ಅದ್ಯತೆ ನೀಡುವುದು ಅಗತ್ಯ.

Advertisement

ಪ್ರವಾಸಿಗರ ಮೋಜು ಮಸ್ತಿ
ಚಾರ್ಮಾಡಿ ಘಾಟಿ ಸರಹದ್ದಿನಲ್ಲಿ ಚಿಕ್ಕಮಗಳೂರು, ಬೆಳ್ತಂಗಡಿ ಭಾಗದ ಪೊಲೀಸರು ಗಸ್ತು ನಡೆಸುತ್ತಿದ್ದರೂ ಅವರ ಕಣ್ತಪ್ಪಿಸಿ ಬಿದಿರ್ತಳ ಸಹಿತ ಅಣ್ಣಪ್ಪ ಬೆಟ್ಟದಿಂದ ಮುಂದೆ ರಸ್ತೆ ಬದಿಯಿರುವ ಕಿರು ಜಲಪಾತದ ಸಮೀಪ ವಾಹನ ನಿಲುಗಡೆಗೊಳಿಸಿ ನೂರಾರು ಮಂದಿ ಪ್ರವಾಸಿಗರು ನೃತ್ಯ ಮಾಡುವ ದೃಶ್ಯ ಇತೀ¤ಚೆಗೆ ಕಂಡುಬಂದಿತ್ತು. ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಬೃಹತ್‌ ಗಾತ್ರದ ಬಂಡೆಯೊಂದು ಉರುಳಿ ರಸ್ತೆಗೆ ಅಪ್ಪಳಿಸಿದ್ದರಿಂದ ರಸ್ತೆ ಛಿದ್ರವಾಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ಸ್ಥಳದಲ್ಲಿ ಮಳೆಗಾಲದ ಸಂದರ್ಭ ವಾಹನ ನಿಲುಗಡೆಗೊಳಿಸದಂತೆ ಸೂಚನಾ ಫಲಕ ಅಳವಡಿಸಬೇಕಿದೆ. ಜತೆಗೆ ರಸ್ತೆ ಬದಿ ವ್ಯಾಪಾರ ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next