Advertisement

3 ದಿನದಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಅರಣ್ಯ: ಬದುಕುಳಿಯಲು ಮನೆ ಬಳಿ ಬಂದ ಕಾಳಿಂಗ

07:34 PM Mar 07, 2023 | Team Udayavani |

ಕೊಟ್ಟಿಗೆಹಾರ: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದ ವ್ಯಾಪ್ತಿಗೆ ಸೇರುವ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶ ಕಳೆದ ಮೂರು ದಿನಗಳಿಂದ ನಿರಂತರವಾಗಿ ಹೊತ್ತಿ ಉರಿಯುತ್ತಿದೆ. ಚಾರ್ಮಾಡಿಯ ದಟ್ಟಕಾನನದಲ್ಲಿದ್ದ ಆಶ್ರಯ ಪಡೆದುಕೊಂಡಿದ್ದ ನೂರಾರು ಪ್ರಾಣಿಪಕ್ಷಿಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ. ಆದರೆ, ಕೆಲ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ನಾಡಿನತ್ತ ಮುಖ ಮಾಡಿವೆ.

Advertisement

ಮರದ ಪೊಟರೆ, ಭೂಮಿಯ ಒಳಗೆ ಹೆಚ್ಚಾಗಿ ವಾಸ ಮಾಡುವ ಕಾಳಿಂಗ ಸರ್ಪಗಳು ಮರದಲ್ಲೂ ಇರಲಾಗದೆ, ಬೆಂಕಿ ಬಿದ್ದ ಭೂಮಿಯ ತಾಪದಿಂದ ಭೂಮಿಯ ಒಳಗೂ ಇರಲಾರದೆ ನಾಡಿನತ್ತ ಮುಖ ಮಾಡಿವೆ. ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತುರುವೆ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಆಶ್ರಯ ಪಡೆದುಕೊಳ್ಳಲು ಜಾಗ ಹುಡುಕುತ್ತಿರುವಾಗ ಸ್ಥಳಿಯರ ಕಣ್ಣಿಗೆ ಬಿದ್ದು ಸೆರೆಯಾಗಿದೆ.

ತುರುವೆ ಗ್ರಾಮದ ಸಮುದಾಯ ಭವನದ ಬಳಿ ಬಂದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪ ಬೆಚ್ಚನೆಯ ಜಾಗ ಹುಡುಕುತ್ತಿದ್ದ ವೇಳೆ ಸ್ಥಳಿಯರ ಕಣ್ಣಿಗೆ ಬಿದ್ದಿದೆ. ದೈತ್ಯಾಕಾರದ ಕಾಳಿಂಗ ಸರ್ಪವನ್ನ ಕಂಡ ಸ್ಥಳಿಯರು ಆತಂಕದಿಂದ ಕೂಗಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಅರ್ಧ ಗಂಟೆಗಳ ಕಾರ್ಯಾಚರಣೆ ನಡೆಸಿ ದೈತ್ಯ ಕಾಳಿಂಗನನ್ನ ಸೆರಿ ಹಿಡಿದಿದ್ದಾರೆ. ಸೆರೆ ಹಿಡಿದು ಬಳಿಕ ತೀವ್ರ ನಿತ್ರಾಣಗೊಂಡಿದ್ದ ಕಾಳಿಂಗ ಸರ್ಪಕ್ಕೆ ಹಾವಾಡಿಗ ನೀರು ಕುಡಿಸಿದ್ದಾನೆ. ಈ ಕಾಳಿಂಗ ಸರ್ಪ ಎಷ್ಟು ದೈತ್ಯಾಕಾರವಿದೆ ಅಂದ್ರೆ, ಸೆರೆ ಹಿಡಿದ ಸ್ನೇಕ್ ಆರೀಫ್ ಅದನ್ನ ಎತ್ತಿಕೊಳ್ಳಲು ಕಷ್ಟಪಡಬೇಕಾದಷ್ಟು ಭಾರವಾಗಿತ್ತು ಈ ಕಾಳಿಂಗ ಸರ್ಪ.

ಕೊನೆಗೆ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಘಾಟಿಯಲ್ಲೇ ಬೆಂಕಿ ಬೀಳದ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ, ಚಾರ್ಮಾಡಿ ಘಾಟಿಯ ಸುತ್ತಮುತ್ತಲಿನ ಜನ ಭಯದಲ್ಲಿ ಬದುಕುವಂತಾಗಿದೆ. ಅರಣ್ಯಕ್ಕೆ ಬಿದ್ದಿರೋ ಬೆಂಕಿ ನಿಲ್ಲುವಂತೆ ಕಾಣುತ್ತಿಲ್ಲ. ಮೂರು ದಿನಗಳಿಂದ ಒಂದೇ ಸಮನೆ ಹೊತ್ತಿ ಧಗಧಗಿಸುತ್ತಿದೆ. ಈ ವೇಳೆ ಕಾಡುಪ್ರಾಣಿಗಳು ಕಾಡಂಚಿನ ಗ್ರಾಮಗಳಿಗೆ ಬಂದರೆ ಏನು ಮಾಡುವುದು, ಬದುಕುವುದು ಹೇಗೆಂದು ಜನ ಆತಂಕದಿಂದ ಬದುಕುತ್ತಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣ ನಾವು ಸಂಪಾದಿಸಿದ್ದು;ಗಳಗಳನೆ ಅತ್ತ ಮಾಡಾಳ್ ವಿರೂಪಾಕ್ಷಪ್ಪ!

Advertisement
Advertisement

Udayavani is now on Telegram. Click here to join our channel and stay updated with the latest news.

Next