ಬೆಳ್ತಂಗಡಿ: ಚಾರ್ಮಾಡಿಯ ಪಾಂಡಿಕಟ್ಟೆ ಕೃಷ್ಣನಗರ ಎಂಬಲ್ಲಿ ಕೊಟ್ಟಿಗೆಹಾರದಿಂದ ಬೆಳ್ತಂಗಡಿ ಕಡೆ ತೆರಳುತ್ತಿದ್ದ ಕಾರು ಧರೆಗೆ ಢಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಪರಸ್ಪರ ಸಂಬಂಧಿಕರಾದ 6 ಮಂದಿ ಬೆಳ್ತಂಗಡಿ ಕಡೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಚಾರ್ಮಾಡಿ ಘಾಟಿ ಇಳಿದ ಕೂಡಲೇ ಕಾರು ಧರೆಗೆ ಢಿಕ್ಕಿಯಾಗಿದ್ದು ಸಾಗರದ ವಿನೋದ್ ಕುಮಾರ್ ಡಿ. (41), ಶೃಂಗೇರಿಯ ಅನಸೂಯಾ (72) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಗರದ ಶರ್ಮಿಳಾ (41), ಪ್ರಣವಸ್ಥಿತಾ (11), ಶೃಂಗೇರಿಯ ಸಿಂಧೂ (37), ಶ್ರಾವಣಿ (10) ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ರೆ.
ಅಪಘಾತ ಸಂಭವಿಸಿದ ತತ್‌ಕ್ಷಣ ಸ್ಥಳೀಯರು ಗಾಯಾಳುಗಳನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಉಜಿರೆ ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.