ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇಗುಲದ ಕಾಣಿಕೆ ಹುಂಡಿ ಹಣವನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಇತಿಹಾಸ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇಗುಲವಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರು ಭಯ-ಭಕ್ತಿಯಿಂದ ಪೂಜೆ ಸಲ್ಲಿಸಿ, ಕೈಮುಗಿದು ಕಾಣಿಕೆ ಹಾಕುತ್ತಾರೆ. ಈ ವೇಳೆ ಹುಂಡಿಯಿಂದ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಸ್ಥಳಿಯರು ಧರ್ಮದೇಟು ನೀಡಿದ್ದಾರೆ.
ಇದನ್ನೂ ಓದಿ:ಅಜಾನ್ ವಿವಾದ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಲು ಸೂಚನೆ: ಸಿಎಂ ಬೊಮ್ಮಾಯಿ
ವ್ಯಕ್ತಿಯನ್ನು ಬೇಲೂರು ಮೂಲದವನು ಎಂದು ಗುರುತಿಸಲಾಗಿದ್ದು, ಈತ ಕಾಣಿಕೆ ಹುಂಡಿ ಹಣವನ್ನು ಜೇಬಿಗೆ ತುಂಬಿಕೊಂಡಿದ್ದ ಎನ್ನಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ವಿಡಿಯೋದಲ್ಲಿ ಮಾತನಾಡಿದ್ದು, ನಾನು ಹುಂಡಿಗೆ ಒಂದಿಷ್ಟು ಹಣವನ್ನು ಹಾಕಿದ್ದೆ, ಮತ್ತೊಂದಿಷ್ಟು ಹಣವನ್ನು ಹುಂಡಿಗೆ ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಸುಳ್ಳು ಹೇಳಿದ್ದಾನೆ. ಸ್ಥಳೀಯರು ಮತ್ತೆ ಹೊಡೆದಾಗ ತನ್ನ ತಪ್ಪನ್ನು ಒಪ್ಪಿಗೊಂಡಿದ್ದಾನೆ.