ಲಂಡನ್: ಬ್ರಿಟನ್‌ನ ದೊರೆಯಾಗಿ ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕ ಶನಿವಾರ ನಡೆಯಿತು. ಕ್ಯಾಮಿಲಾ ಅವರು ಅಧಿಕೃತವಾಗಿ ರಾಣಿ ಪಟ್ಟಕ್ಕೆ ಏರಿದರು.
70 ವರ್ಷಗಳ ಹಿಂದೆ ರಾಣಿ ಎರಡನೇ ಎಲಿಜಿಬತ್ ಪಟ್ಟಾಭಿಷೇಕ ಮಹೋತ್ಸವ ನಡೆದಿತ್ತು. ಇದಾದ ಇಷ್ಟು ವರ್ಷಗಳ ಬಳಿಕ ಬಕ್ಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆಯುತ್ತಿರುವ ಭವ್ಯ ಉತ್ಸವ ಇದಾಗಿದೆ. ಮೂರನೇ ಚಾರ್ಲ್ಸ್ ಮತ್ತು ಕ್ಯಾಮಿಲಾ ಅವರಿಗೆ ಪವಿತ್ರ ತೈಲದಿಂದ ಪಟ್ಟಾಭಿಷೇಕ ಮಾಡಲಾಯಿತು.
ಪಟ್ಟಾಭಿಷೇಕ ಮಹೋತ್ಸವದಲ್ಲಿ ಹಿಂದೂ, ಬೌದ್ಧ, ಯಹೂದಿ, ಮುಸ್ಲಿಂ ಮತ್ತು ಸಿಖ್ ಸಮುದಾಯದ ನಾಯಕರು ಭಾಗವಹಿಸಿದ್ದರು. ಜಗತ್ತಿನ 100ಕ್ಕೂ ಹೆಚ್ಚು ನಾಯಕರು ಸೇರಿದಂತೆ 2,300 ವಿಶೇಷ ಆಹ್ವಾನಿತರ ಎದುರು ಮೂರನೇ ಚಾರ್ಲ್ಸ್ ಅವರು, ಬ್ರಿಟನ್‌ನಲ್ಲಿ ಪ್ರೊಟೆಸ್ಟೆಂಟ್ ನಂಬಿಕೆಯನ್ನು ಎತ್ತಿಹಿಡಿಯುವ ಮತ್ತು ಸಂಸತ್ ಸ್ಥಾಪಿಸಿದಂತೆ ಚರ್ಚ್ ಆಫ್ ಇಂಗ್ಲೆಂಡ್‌ನ ಹಕ್ಕುಗಳನ್ನು ರಕ್ಷಿಸುವುದಾಗಿ ಇದೇ ವೇಳೆ ವಾಗ್ಧಾನ ಮಾಡಿದರು.
ಇದಕ್ಕೂ ಮುನ್ನ ವೆಸ್ಟ್‌ಮಿನಿಸ್ಟರ್ ಅಬೆಯಿಂದ ಬಕ್ಕಿಂಗ್‌ಹ್ಯಾಮ್ ಅರಮನೆವರೆಗೆ ಮೆರವಣಿಗೆಯಲ್ಲಿ ಕುದುರೆಯ ಸಾರೋಟಿನಲ್ಲಿ ಆಗಮಿಸಿದ ಮೂರನೇ ಚಾರ್ಲ್ಸ್ ಮತ್ತು ಕ್ಯಾಮಿಲಾ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸುಮಾರು 20 ಲಕ್ಷ ನಾಗರಿಕರು ಕರತಾಡನದ ಮೂಲಕ ಸ್ವಾಗತಿಸಿದರು. ಮೆರವಣಿಗೆಯಲ್ಲಿ 7,000 ಸೇನಾ ಸಿಬ್ಬಂದಿ ಪಥ ಸಂಚಲನ ನಡೆಸಿದರು.
ನಂತರ ನಡೆದ ಪಟ್ಟಾಭಿಷೇಕ ಮಹೋತ್ಸವದ ಆಂಗ್ಲಿಕನ್ ಸೇವೆಯ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬೈಬಲ್‌ನ ಹೊಸ ಒಡಂಬಡಿಕೆಯನ್ನು ನೂತನ ಬ್ರಿಟನ್ ದೊರೆಗೆ ಬೋಧಿಸಿದರು. ಮೂರನೇ ಚಾರ್ಲ್ಸ್ ಮತ್ತು ಕ್ಯಾಮಿಲಾ ಅವರಿಗೆ ಕ್ಯಾಟರ್‌ಬರಿಯ ಆರ್ಚ್‌ಬಿಶಫ್ ಅವರು ಕಿರೀಟ ತೊಡಿಸಿದರು. ಈ ಮೂಲಕ ಅಧಿಕೃತವಾಗಿ ಬ್ರಿಟನ್ ರಾಜ ಮತ್ತು ರಾಣಿಯಾಗಿ ಪಟ್ಟಾಭಿಷಿಕ್ತರಾದರು.
ಜಗದೀಪ್ ಧನ್‌ಕರ್ ಭಾಗಿ
ಪಟ್ಟಾಭಿಷೇಕ ಮಹೋತ್ಸವದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ್ತು ಅವರ ಪತ್ನಿ ಡಾ. ಸುದೀಪ್ ಧನ್‌ಕರ್, ಹಿಂದೂ ಸಮುದಾಯದ ಪ್ರತಿನಿಧಿಯಾಗಿ ರಾಧಾ ಮೋಹನ್ ದಾಸ್, ಸಿಖ್ ಸಮುದಾಯದ ಪ್ರತಿನಿಧಿಯಾಗಿ ಇಂದ್ರಜಿತ್ ಸಿಂಗ್, ಬೌದ್ಧ ಸಮುದಾಯದ ಪ್ರತಿನಿಧಿಯಾಗಿ ವೆನ್ ಬಗೊಡಾ, ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿ ಅಲಿಯಾ ಅಜಮ್ ಭಾಗವಹಿಸಿದ್ದರು. ಇದೇ ವೇಳೆ ಬೆಂಗಳೂರಿನ ಸಮನೇತನಹಳ್ಳಿಯ ಡಾ. ಇಸಾಕ್ ಮಥಾಯಿ ಮತ್ತು ಅವರ ಪತ್ನಿ ಸುಜ ಅವರು ಪಾಲ್ಗೊಂಡಿದ್ದರು.