Advertisement
ಮಕ್ಕಳು ಬಾಯಿಬಿಟ್ಟು ಹೇಳದಿದ್ದರೂ ತಾಯಿಗೆ ತನ್ನ ಮಕ್ಕಳ ಕಷ್ಟ ಅರ್ಥವಾಗುತ್ತದೆ. ಅದೇ ರೀತಿ, ತಾಯಿ ಹೃದಯದವರಿಗೆ ತಮ್ಮ ಮಕ್ಕಳ ಕಷ್ಟವಷ್ಟೇ ಅಲ್ಲ, ಇತರರ ಕಷ್ಟವೂ ಅರ್ಥವಾಗುತ್ತದೆ. ಸಮಾಜವನ್ನು ತಲ್ಲಣಿಸುವಂಥ ಘಟನೆಗಳು ನಡೆದಾಗ, ಎಲ್ಲರಿಗಿಂತ ಮೊದಲು ಸ್ಪಂದಿಸುವವರು ಅವರೇ. ಈ ಮಾತುಗಳನ್ನು ಹೇಳುವಾಗ ಮೊದಲು ನೆನಪಾಗುವುದು ಇನ್ಫೋಸಿಸ್ ಫೌಂಡೇಶನ್‌ನ ಸ್ಥಾಪಕಿ ಸುಧಾ ಮೂರ್ತಿಯವರು ಮತ್ತು ಇದುವರೆಗೆ ಅವರು ಮಾಡಿರುವ ಜನಪರ ಕೆಲಸಗಳು. ಸದ್ಯ, ರಾಜ್ಯದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಇನ್ಫೋಸಿಸ್ ಫೌಂಡೇಶನ್ ಮುಂದೆ ಬಂದಿರುವುದು ಮೇಲಿನ ಮಾತುಗಳನ್ನು ಮತ್ತೂಮ್ಮೆ ರುಜುವಾತು ಮಾಡಿದೆ.Related Articles
ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬಂತೆ, ತಾವು ಮಾಡಿದ ಕೆಲಸಗಳನ್ನು ಸುಧಾ ಮೂರ್ತಿ ಲೆಕ್ಕವಿಟ್ಟವರೇ ಅಲ್ಲ. ಮಾಧ್ಯಮಗಳ ಎದುರು ಹೆಮ್ಮೆಯಿಂದ ಹೇಳಿಕೊಂಡು ಬೀಗಿದವರೂ ಅಲ್ಲ. ತನ್ನ ಪಾಡಿಗೆ ತಾನು ದಾನ ಮಾಡುತ್ತಲೇ ದೊಡ್ಡವರಾದವರು. ಅವರ ಜನಪರ ಕಾರ್ಯಗಳನ್ನು ಲೆಕ್ಕ ಹಾಕುವುದಾದರೂ ಹೇಗೆ? ಅವರ ಚಟುವಟಿಕೆಗಳ ವ್ಯಾಪ್ತಿ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ತಮಿಳುನಾಡಿನ ಕಾಂಚೀಪುರಂನ ಕ್ಯಾನ್ಸರ್ ಆಸ್ಪತ್ರೆಗೆ 50 ಹಾಸಿಗೆಗಳ ವಾರ್ಡ್, ಒರಿಸ್ಸಾದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ…, ಮಹಾರಾಷ್ಟ್ರದ ಹಳ್ಳಿಗಳಲ್ಲಿ ಪುಸ್ತಕ ವಿತರಣೆ, ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಅಭಿವೃದ್ಧಿ ಚಟುವಟಿಕೆಗಳು, ನೆರೆ ಸಂತ್ರಸ್ತರಿಗೆ ನೆರವು, ಅನೇಕ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಉಚಿತ ಕಂಪ್ಯೂಟರ್, ದೇಶಕ್ಕಾಗಿ ಮಡಿದ ಸೈನಿಕರ ಕುಟುಂಬಕ್ಕೆ ನೆರವು… ಹೀಗೆ, ಅವರ ಕೆಲಸಗಳ ಪಟ್ಟಿ ಉದ್ದವಿದೆ.
Advertisement
ಚೀಲ ಹಿಡಿದು ಸಂತೆಗಿಳಿದರುಸಹಾಯಕ್ಕಷ್ಟೇ ಅಲ್ಲ, ಸರಳತೆಯ ಇನ್ನೊಂದು ಹೆಸರು ಕೂಡಾ ಸುಧಾ ಮೂರ್ತಿಯೇ. ಆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ್ದೇ ಇಲ್ಲ. ಅವರ ಉಡುಗೆ-ತೊಡುಗೆ, ಮಾತು, ಚಟುವಟಿಕೆಗಳಲ್ಲೇ ಅದು ತಿಳಿಯುತ್ತದೆ. ಸುಧಾ ಮೂರ್ತಿ, ಎಂದಿಗೂ ವಸ್ತ್ರ-ಒಡವೆಗಳ ಮೇಲೆ ಮೋಹಗೊಂಡವರೇ ಅಲ್ಲ. ಇತ್ತೀಚೆಗೆ, ಹುಟ್ಟೂರಾದ ಜಮಖಂಡಿಯ ವಾರದ ಸಂತೆಯಲ್ಲಿ ಹೂವು, ತರಕಾರಿ, ದವಸ-ಧಾನ್ಯ ಖರೀದಿಸಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದ ರೈತರನ್ನು ಮಾತನಾಡಿಸಲೆಂದು ಬಂದಿದ್ದ ಅವರು, ರೈತರ ಕಷ್ಟಗಳನ್ನು ಆಲಿಸಿ, ಬಂದ ಕೆಲಸ ಮುಗೀತು ಎಂದು ಹೊರಟು ನಿಲ್ಲಲ್ಲಿಲ್ಲ. ಬಾಲ್ಯದ ಬದುಕನ್ನು ನೆನಪಿಸಿಕೊಂಡರು. ಚಿಕ್ಕಂದಿನಲ್ಲಿ ಅಮ್ಮನೊಂದಿಗೆ ಸಂತೆಗೆ ಬಂದಿದ್ದು ನೆನಪಾಗಿ, ಸಂತೆಗೆ ಹೋಗಿ ಅಲ್ಲಿದ್ದವರ ಸುಖ-ದುಃಖ ವಿಚಾರಿಸಿದ್ದಾರೆ. ತಲೆಮಾರುಗಳಿಗೆ ಆಗಿ ಮಿಗುವಷ್ಟು ಸಂಪತ್ತಿದ್ದರೂ, ಶ್ರೀಮಂತಿಕೆಯ ಗಾಳಿಯೂ ತಾಕದಂತೆ ನಮ್ಮೊಡನೆ, ನಮ್ಮಂತೆಯೇ ಒಡನಾಡುವ ಅಮ್ಮನಿಗೆ ಇನ್ನಷ್ಟು ಮತ್ತಷ್ಟು ಒಳ್ಳೆಯದಾಗಲಿ, ಅವರ ಒಳ್ಳೇತನ ನಮ್ಮಲ್ಲಿ ಕಿಂಚಿತ್ತಾದರೂ ಬೆಳೆಯಲಿ. ಅವರಿಷ್ಟದಂತೆ ಬದುಕಲು ಬಿಡೋಣ
ಬಹುತೇಕ ಹೆಣ್ಣುಮಕ್ಕಳು ಅತ್ತೆಯನ್ನು ತಮ್ಮ ಪಾಲಿನ ವಿಲನ್ ಎಂದೇ ಭಾವಿಸುತ್ತಾರೆ. ಕೆಲವು ಅತ್ತೆಯರು, ತಮ್ಮ ಸೊಸೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಕೆಯ ಕೆಲಸದಲ್ಲಿ ತಪ್ಪು ಹುಡುಕುವುದು, ಸೊಸೆಗೆ ಕಿರಿಕಿರಿ, ಕಸಿವಿಸಿ ಆಗುವಂತೆ ಮಾಡುವುದು, ಮಗ-ಸೊಸೆಯ ದಾಂಪತ್ಯದಲ್ಲಿ ಮೂಗು ತೂರಿಸುವುದು ಸತ್ಯವೇ. ಅಂಥ ಅತ್ತೆಯರಿಗೆ ಸುಧಾ ಮೂರ್ತಿಯವರು ಕೆಲವು ಮಾತುಗಳನ್ನು ಹೇಳಿದ್ದಾರೆ. “ನಾನು, ನನ್ನ ಸೊಸೆ ಮತ್ತು ಅಳಿಯನಿಗೆ ಹೇಳಿಬಿಟ್ಟಿದ್ದೇನೆ, ನೀವು ನನಗಾಗಿ ಯಾವ ಹೊಂದಾಣಿಕೆಯನ್ನೂ ಮಾಡಿಕೊಳ್ಳುವುದು ಬೇಡ ಎಂದು. ಹಳೆ ಕಾಲದವರಾದ ನಾವೇ, ಅವರ ಜೀವನಶೈಲಿಗೆ ಹೊಂದಿಕೊಳ್ಳಬೇಕು. ಅದನ್ನು ಬಿಟ್ಟು, ಅವರು ನಮ್ಮ ದಾರಿಗೆ ಬರಬೇಕು ಅಂತ ನಿರೀಕ್ಷಿಸಬಾರದು. ನಾವು ನಮ್ಮ ಇನ್ನಿಂಗ್ಸ್ ಅನ್ನು ಮುಗಿಸುವ ಹಂತದಲ್ಲಿದ್ದೇವೆ, ಇನ್ನೇನಿದ್ದರೂ ಆಟ ಅವರದ್ದು. ಅವರಿಷ್ಟದಂತೆ ಬದುಕು ಕಟ್ಟಿಕೊಳ್ಳಲು ಹಿರಿಯರಾದ ನಾವು ಅವಕಾಶ ಮಾಡಿಕೊಡಬೇಕು’- ಈ ಮಾತುಗಳು ಜಗತ್ತಿನ ಎಲ್ಲ ಅತ್ತೆಯರಿಗೂ ಅರ್ಥವಾದರೆ ಎಷ್ಟು ಚೆನ್ನ!