Advertisement

ದತ್ತ ಗುರುವಿನ ಚರಿತೆ

05:48 PM Jul 13, 2019 | mahesh |

ಅತ್ರಿ-ಅನಸೂಯೆಯರ ಅಲೌಕಿಕ ಮಹಿಮೆಯ ಸಾಕುಪುತ್ರನಾಗಿ ಅವತರಿಸಿದ ತ್ರಿಮೂರ್ತಿಸ್ವರೂಪಿ ಶ್ರೀ ದತ್ತಾತ್ರೇಯ, ಸರ್ವಜ್ಞ ಮೂರ್ತಿಯೆಂದು, ತ್ರಿಗುಣಾತೀತನೆಂದು, ಸರ್ವಾಭೀಷ್ಟ ಪ್ರದಾತನೆಂದು ಖ್ಯಾತಿವೆತ್ತವನು. ದತ್ತ ಗುರುವೆಂಬ ಅಭಿಧಾನಕ್ಕೆ ಪಾತ್ರನಾದವನು. ಗುರು ಪರಂಪರೆಯ ಮೂಲಪುರುಷ ಎಂಬ ಗೌರವಕ್ಕೂ ಭಾಜನನಾದವನು.

Advertisement

ಗುರು ಚರಿತ್ರೆಯ ಪಾರಾಯಣ, ಶ್ರವಣ ಹಾಗೂ “ದತ್ತಗುರು ಶ್ಲೋಕ’ಗಳ ಶ್ರದ್ಧಾನ್ವಿತ ಅನುಸಂಧಾನದಿಂದ ಪುರುಷಾರ್ಥಗಳು ಸಿದ್ಧಿಸುತ್ತವೆಂಬುದು ದತ್ತ ಪರಂಪರೆಯಲ್ಲಿ ಭಕ್ತಿ ಹಾಗೂ ಶ್ರದ್ಧೆಯನ್ನಿರಿಸಿಕೊಂಡಿರುವ ಲಕ್ಷಾಂತರ ಭಕ್ತಭಾವುಕರ ದೃಢ ನಂಬಿಕೆ. ಉತ್ತಮ ಆರೋಗ್ಯ ಪ್ರಾಪ್ತಿಗಾಗಿ, ಪಾರಮಾರ್ಥಿಕ ಫ‌ಲಗಳ ಸಂಪಾದನಕ್ಕಾಗಿ, ಸಂತತಿ ಭಾಗ್ಯಕ್ಕಾಗಿ, ದುಃಖದುರಿತಗಳ ನಿವಾರಣೆಗಾಗಿ ಗುರುಚರಿತ್ರೆಯ ಆಯ್ದ ಅಧ್ಯಾಯಗಳನ್ನು ಪಠಿಸುವ ಪದ್ಧತಿಯೂ ರಾಷ್ಟ್ರದ ವಿವಿಧೆಡೆಗಳಲ್ಲಿ ನಿಡುಗಾಲದಿಂದ ಮುಂದುವರಿದುಕೊಂಡು ಬಂದಿದೆ. ಸತ್ಪಲಪ್ರದಾಯಕ ನಿತ್ಯಪಾರಾ ಯಣ ಗ್ರಂಥವೆಂದು ಪ್ರಸಿದ್ಧಿ ಪಡೆದಿರುವ ಗುರುಚರಿತ್ರೆಯನ್ನೀಗ ಸುರೇಶ್‌ ಜ. ಪೈ ಅವರು ಸರಳ-ಸುಲಭ ವಾಕ್ಯರಚನೆಯ, ಸುಭಗ ಶೈಲಿಯ ವಾಚನೀಯ ಗುಣದ ಕಥನವನ್ನಾಗಿಸಿ ದತ್ತಭಕ್ತರಿಗಾಗಿ ಸಂಕಲಿಸಿಕೊಟ್ಟಿದ್ದಾರೆ. ಮಹಾಲಸಾ ನಾರಾಯಣಿ ಚರಿತ್ರೆ (ಕನ್ನಡ, ಇಂಗ್ಲಿಷ್‌, ಮರಾಠಿ), ವೈದಿಕರ ಹಾಗೂ ದೇವತೆಗಳ ಕೈಪಿಡಿ ಮುಂತಾದ ಗ್ರಂಥಗಳನ್ನು ಪ್ರಕಟಿಸಿರುವ ಮಹಾಲಸಾ ನಾರಾಯಣೀ ದೇವೀ ಕ್ಷೇತ್ರದ ಪ್ರಕಟನೆ ಇದು.

ಶ್ರೀ ಗುರುಚರಿತ್ರೆ
ಸಂ.: ಸುರೇಶ್‌ ಜ. ಪೈ
ಪ್ರ.: ಶ್ರೀ ಮಹಾಲಸಾ ನಾರಾಯಣೀ ದೇವಿಕ್ಷೇತ್ರ, 41ನೇ ಶಿರೂರು, ಹರಿಖಂಡಿಗೆ-576124, ಉಡುಪಿ ಜಿಲ್ಲೆ
ಮೊಬೈಲ್‌ : 97394 86200
ಮೊದಲ ಮುದ್ರಣ: 2019 ಬೆಲೆ: ರೂ. 300

ಜಕಾ

Advertisement

Udayavani is now on Telegram. Click here to join our channel and stay updated with the latest news.

Next