ಯಮಕನಮರಡಿ: ಭಾರತದ ಪರಂಪರೆಯಲ್ಲಿ ಎಲ್ಲ ಧರ್ಮಗಳ ಜನರು ಉದಾರವಾಗಿ ದಾನ ನೀಡುತ್ತಿರುವುದರಿಂದಲೇ ಇಲ್ಲಿ ಮಠ-ಮಾನ್ಯಗಳು, ಮಸೀದಿಗಳು ಮತ್ತು ಚರ್ಚುಗಳು ತಲೆ ಎತ್ತಿ ನಿಂತಿವೆ ಎಂದು ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಅವರು ರವಿವಾರ ಗ್ರಾಮದ ಹುಣಸಿಕೊಳ್ಳಮಠದ ಶ್ರೀ ರಾಚೋಟಿ ಸ್ವಾಮಿಗಳ ಪಟ್ಟಾಧಿಕಾರದ ರಜತ ಮಹೋತ್ಸವ, ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ದಾನಿಗಳ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 5ಸಾವಿರ ಮಠಗಳಿವೆ. ಆದರೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲಿರುವುದು ಕೇವಲ 2250 ಮಠಗಳು ಮಾತ್ರ. ಉಳಿದವೆಲ್ಲಾ ವೈಯಕ್ತಿಕ ಮನೆಗಳಾಗಿ ಪರಿವರ್ತನೆಯಾಗಿವೆ. ಯಮಕನಮರಡಿಯ ಲಿಂ| ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳ ಪರಂಪರೆಯನ್ನು ರಾಚೋಟಿ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಸಮಾಧಾನದ ಸಂಗತಿ ಎಂದರು.
ಆಹಾರ, ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ ಕತ್ತಿ ಮಾತನಾಡಿ, ಈ ಭಾಗದಲ್ಲಿ ಹುಣಸಿಕೊಳ್ಳಮಠಕ್ಕೆ ಅಗ್ರ ಸ್ಥಾನವಿದೆ. ಅದರ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದರು.
ಡಾ| ಸುರೇಶ ದುಗ್ಗಾಣಿ ಮಾತನಾಡಿ, ಯಮಕನಮರಡಿ ಹಾಗೂ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದ ಸುಸುಜ್ಜಿತವಾದ ಆಸ್ಪತ್ರೆಯನ್ನು ಬರುವ ದಿನದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಗ್ರಾಮೀಣ ಜನತೆ ಅನುಕೂಲವಾಗಲಿದೆ ಎಂದರು. ಶ್ರೀ ರಾಚೋಟಿ ಸ್ವಾಮಿಗಳ ವಿಭೂತಿಯಿಂದ ತುಲಾಭಾರ ಕಾರ್ಯಕ್ರಮ, ದಾನಿಗಳ ಸತ್ಕಾರ ಜರುಗಿತು.
ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ದ ಶ್ರೀಗಳು, ಯಕ್ಕುಂಡಿಯ ಪಂಚಾಕ್ಷರಿ ಶ್ರೀಗಳು, ಬೈಲಹೊಂಗಲದ ಮೂರು ಸಾವಿರ ಶಾಖಾ ಮಠದ ಪ್ರಭು ನೀಲಕಂಠ ಶ್ರೀಗಳು, ಡಾ.ವಿಜಯ ಸಂಕೇಶ್ವರ, ಫಕಿರವ್ವಾ ಹಂಚಿನಮನಿ, ಸುನೀತಾ ಬಿಸಿರೊಟ್ಟಿ, ರಮೇಶ ತುಬಚಿ, ಈರಣ್ಣಾ ದುಗ್ಗಾಣಿ, ವೀರಣ್ಣ ಬಿಸಿರೊಟ್ಟಿ, ಗಿರೀಶ ಮಿಶ್ರಿಕೋಟಿ, ಸಿದ್ದಪ್ಪಾ ಶಿಳ್ಳಿ, ಅರ್ಜುನ ವಾಘ, ಇತರರಿದ್ದರು. ಶಿವಶಂಕರ ಝುಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮಿ ಮಿರ್ಜಿ ಹಾಗೂ ಎಸ್.ಐ.ಅಮ್ಮಿನಭಾವಿ ನಿರ್ವಹಿಸಿದರು. ರವಿ ಜಿಂಡ್ರಾಳಿ ವಂದಿಸಿದರು.