ಮೂಡುಬಿದಿರೆ: ಒಂಟಿ ಸಾಹಸದಲ್ಲಿ ಅಶಕ್ತರಿಗೆ ಮನೆ ಕಟ್ಟಿ ಕೊಡುತ್ತ ಬರುತ್ತಿರುವ ಮೂಡುಬಿದಿರೆ ಆನಿಲ್ ಮೆಂಡೋನ್ಸಾ 4 ತಿಂಗಳ ಅವಧಿಯಲ್ಲಿ ಕರಿಂಜೆಯಲ್ಲಿ ‘ಅನುಗ್ರಹʼ, ಅಲಂಗಾರ್ ನಲ್ಲಿ ‘ಆಶೀರ್ವಾದ’ ನಿರ್ಮಿಸಿದ ಬೆನ್ನಲ್ಲೇ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ನೆತ್ತೋಡಿಯ ನೆಕ್ಕಿದಡ್ಪು ಗುಡ್ಡದಲ್ಲಿ 3ನೇ ಮನೆಯನ್ನು ಪೂರ್ಣಗೊಳಿಸುತ್ತಿದ್ದಾರೆ. ಅದೇ ʼಆಸರೆʼ.
ಗೇರುಬೀಜ ಕಾರ್ಖಾನೆಯೊಂದರಲ್ಲಿ ಕಾರ್ಮಿಕೆಯಾಗಿರುವ ವನಿತಾ ಅವರು ಪತಿ ಶ್ರೀನಿವಾಸ ಜತೆಗೂಡಿ ನೆತ್ತೋಡಿಯ ನೆಕ್ಕಿದಡ್ಪು ಗುಡ್ಡದಲ್ಲಿ ಅಕ್ರಮ ಸಕ್ರಮದಲ್ಲಿ ಲಭ್ಯ ನಿವೇಶನದಲ್ಲಿ ಪುಟ್ಟ ಮನೆ ಕಟ್ಟುವ ಕನಸನ್ನು ಕಂಡು ಕೆಲಸ ಆರಂಭಿಸುವಾಗಲೇ ಅಂದರೆ ಸುಮಾರು 8 ತಿಂಗಳ ಹಿಂದೆ ಪತಿಯನ್ನು ಕಳೆದುಕೊಂಡರು. ಅವರೊಂದಿಗೆ ಹೈಸ್ಕೂಲ್, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಪುತ್ರರೂ ಇದ್ದಾರೆ. ಕೈಯಲ್ಲಿ ಬಿಡಿಗಾಸಿಲ್ಲ, ಬದುಕು ಸಾಗಿಸುವುದೇ ಕಷ್ಟಕರವಾಗಿರುವಾಗ ಈ ಅರ್ಧದಲ್ಲೇ ನಿಂತ ಮನೆ ನಿರ್ಮಾಣ ಕಾರ್ಯವನ್ನು ಮುಂದುವರಿಸುವುದಾದರೂ ಹೇಗೆ?
ಅಲಂಗಾರಿನಲ್ಲಿ 2ನೇ ಮನೆಯನ್ನು ಪುನರ್‌ನಿರ್ಮಿಸುವ ವೇಳೆ ಅಚಾನಕ್ ಆಗಿ ಅನಿಲ್ ಗೆ ಈ ವಿಷಯ ತಿಳಿದು ಚಿಕ್ಕಾಸೂ ಇಲ್ಲದೇ ಅವರು ಮನೆಯ ನಿರ್ಮಾಣ ಕಾರ್ಯಕ್ಕೆ ಮುಂದಾದರು. ಅನಿಲ್ ಮೆಂಡೋನ್ಸಾ ಸದಸ್ಯರಾಗಿರುವ ಮೂಡುಬಿದಿರೆ ಲಯನ್ಸ್ ಕ್ಲಬ್ 20,000 ರೂ. ನೀಡಿತು. ಗೆಳೆಯ ಗಾಡ್ವಿನ್ ಫೆರ್ನಾಂಡಿಸ್ 300 ಕೆಂಪು ಕಲ್ಲು ಕೊಟ್ಟರು. ಕೃಷಿಕ, ಗುತ್ತಿಗೆದಾರ ಅಲ್ವಿನ್ ಮಿನೇಜಸ್ ಶೌಚಾಲಯದ ಗುಂಡಿ ತೆಗೆದುಕೊಟ್ಟರು. ನೆತ್ತೋಡಿ ರಸ್ತೆಯಿಂದ ಇಳಿಜಾರು ಇಳಿದು ಮತ್ತೆ ಏರು ಹಾದಿಯಲ್ಲಿ ಅದೂ ಮಳೆಬಿದ್ದಾಗ ಕೆಸರು ಕೆಸರಾದ ಮಾರ್ಗದಲ್ಲಿ ಸ್ವತ: ಅನಿಲ್ ಅವರೇ ಕೆಂಪುಕಲ್ಲು ಹೊತ್ತು ರಾಶಿ ಹಾಕಿದರು. ಅವರೇ ಪೆಯಿಂಟ್ ಕೂಡ ಕೊಡುತ್ತಿದ್ದಾರೆ!
ಇದೇ ಸೆ. 23ಕ್ಕೆ ವನಿತಾ ಮತ್ತು ಮಕ್ಕಳು ʼಆಸರೆʼ ಪಡೆದು ನೆಲೆಕಾಣಲಿದ್ದಾರೆ. ಸಿಟ್‌ಔಟ್, ಪುಟ್ಟ ಚಾವಡಿ, ಮಲಗುವ ಕೋಣೆ, ಆಗ್ನೇಯದಲ್ಲಿ ಅಡುಗೆ ಕೋಣೆ ಪೂರ್ಣಗೊಂಡಿದೆ. ಅದರಾಚೆ ಶೌಚಾಲಯ ನಿರ್ಮಾಣವಾಗಲಿದೆ. ನೀರಿನ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಮಾರ್ಗ ಕಂಡುಕೊಳ್ಳಬೇಕಾಗಿದೆ.