Advertisement

UV Fusion: ಅಕ್ಷರ ಲೋಕದ ಸಾರಥಿ

02:43 PM Nov 19, 2023 | Team Udayavani |

ಆತ ನನ್ನ ಅಕ್ಷರ ಲೋಕದ ಸಾರಥಿ. ಬರವಣಿಗೆಯ ಹಿಂದಿನ ಅಕ್ಷರಗಳಿಗೆ ಧ್ವನಿಯಾಗಿ ನಿಂತು ತಪ್ಪನ್ನು ತಿಳಿಹೇಳಿ ನೇರವಾಗಿ ನುಡಿದಾತ. ಪತ್ರಿಕೆಗಳನ್ನು ಆಗೊಮ್ಮೆ ಈಗೊಮ್ಮೆ ಓದುತ್ತಿದ್ದ ನನಗೆ, ಪತ್ರಿಕೋದ್ಯಮದ ಗಂಧ ಗಾಳಿಯೇ ಅರಿಯದ ನನ್ನಂತಹ ಸೋಮಾರಿಯ ಕೈಯಲ್ಲಿ ಲೇಖನಗಳನ್ನು ಬರೆಸಿದಾತ.

Advertisement

ಕೇವಲ ನೋಟ್ಸ್ ಬರೆಯುತ್ತಿದ್ದ ಲೇಖನಿ ಹೊಸ ಹೊಸ ವಿಷಯಗಳ ಬಗ್ಗೆ ಬರೆಯಲಾರಂಭಿಸಿತು ಎಂದರೆ ಅದಕ್ಕೆ ಆತನೇ ಕಾರಣ. ಈ ಕುರಿತು ನನ್ನಲ್ಲಿ ಹೆಮ್ಮೆ ಇದೆ. ವಾಕ್ಯಗಳ ರಚನೆ, ಪದಗಳ ಜೋಡಣೆಯಲ್ಲಿ ಪ್ರತೀ ಬಾರಿಯೂ ನಾನು ಎಡವುತ್ತಿದ್ದಾರೆ. ಆ ಗಳಿಗೆಯಲ್ಲಿ ನಾನು ಬರೆದ ಬರವಣಿಗೆಗೆ ಜೀವ ತುಂಬಿ ಅದರ ಹರಿತ ವ್ಯಾಪ್ತಿಯನ್ನು ಹೆಚ್ಚಿಸಿ ಓದುಗರ ಮನ ಮುಟ್ಟುವಂತೆ ಮಾಡಿದ್ದರೆ ಅದರ ಹಿಂದಿನ ಮಾಯೆ ಆತ.

ಪದವಿಗೆ ಸೇರಿದ ಮೊದಮೊದಲು ಬರವಣಿಗೆ ತಿಳಿದಿರಲಿಲ್ಲ. ಅಂದು ಸರ್‌ ಹೇಳುತ್ತಾರೆ ಎಂದು ಕಾಟಾಚಾರಕ್ಕೆ ಒಂದು ಲೇಖನವನ್ನು ವಾಟ್ಸಪ್‌ ಮುಖಾಂತರ ಕಳಿಸಿಕೊಟ್ಟೆ. ನಾನು ನೋಡಿದ ನಿಜವಾದ ಶ್ರೀಮಂತ ಎನ್ನುವ ಶೀರ್ಷಿಕೆಯ ಬರಹವಾಗಿದ್ದ ಅದು ಪ್ರಭಾವ ಬೀರುವಂತಹ ಬರಹವೇನೂ ಆಗಿರಲಿಲ್ಲ. ಅಕ್ಷರ ದೋಷಗಳಿಂದಲೇ ಕೂಡಿತ್ತು. ಮನಸ್ಸಿಗೆ ಏನು ಬಂತು ಅದನ್ನೇ ಗೀಚಿ ಕಳಿಸಿದ್ದಾರೆ. ಬರೆದು ಮತ್ತೂಮ್ಮೆ ಓದುವ ಗೋಜಿಗೂ ನಾನು ಹೋಗಲಿಲ್ಲ. ಸರ್‌ ಅದನ್ನು ಓದಬಹುದು ಎಂಬ ಯೋಚನೆ ಕೂಡ ನನ್ನಲ್ಲಿ ಆ ದಿನ ಸುಳಿಯಲಿಲ್ಲ. ಅಂದು ಬರವಣಿಗೆಯ ಮಹತ್ವವೇ ನನಗೆ ತಿಳಿದಿರಲಿಲ್ಲ.

ವಾಟ್ಸಪ್‌ ಮೂಲಕ ನಾನು ಕಳಿಸಿದ ಲೇಖನವನ್ನು ತಿದ್ದಿ ಅದಕ್ಕೆ ಅಂದದ ಪದಗಳ ಜೋಡಿಸಿ, ಅಕ್ಷರ ದೋಷಗಳನ್ನು ಸರಿಪಡಿಸಿ, ಸುಂದರವಾದ ಬರವಣಿಗೆಯನ್ನು ಸಿದ್ಧಮಾಡಿ ನನಗೆ ಕಳುಹಿಸಿದರು. ಅದರಲ್ಲಿ ಆಗಿದ್ದ ಬದಲಾವಣೆಗಳನ್ನು ಗಮನಿಸಿದೆ. ಜತೆಗೆ ಆ ಲೇಖನದ ಕೆಳಗೆ ಗಿರೀಶ್‌ ನೀನೊಬ್ಬ ಒಳ್ಳೆಯ ಬರಹಗಾರನಾಗುವೆ. ಬರೆದ ಬರವಣಿಗೆಯ ಒಂದೆರಡು ಬಾರಿ ಓದು. ಸಾಕಷ್ಟು ಪುಸ್ತಕಗಳನ್ನು ಓದು ಎಂಬ ಸ್ಫೂರ್ತಿದಾಯಕ ಮಾತು ನನ್ನ ಜೀವನದ ಗತಿಯನ್ನೇ ಬದಲಾಯಿಸಿತು. ಆ ದಿನದಿಂದ ಒಂದೊಂದೇ ಲೇಖನಗಳನ್ನು ಬರೆಯಲು ಶುರು ಮಾಡಿದೆ. ಅದು ಸೂಕ್ತ ವೇದಿಕೆಯಲ್ಲಿ ಪ್ರಕಟವಾಯಿತು. ನನ್ನ ಗೆಳೆಯರು, ಮನೆಯವರು, ಅಧ್ಯಾಪಕರೂ ಗುರುತಿಸಿ ಪೋ›ತ್ಸಾಹಿಸಿದರು.

ಜಿಪಿ ಸರ್‌ ಒಬ್ಬ ಒಳ್ಳೆಯ ಉಪನ್ಯಾಸಕ ಮಾತ್ರವಲ್ಲದೆ ಉತ್ತಮ ಸ್ನೇಹಿತ ಕೂಡ. ಸರ್‌ ನನ್ನ ಜೀವನದಲ್ಲಿ ಬರದೇ ಇರುತ್ತಿದ್ದರೆ ನಾನೊಬ್ಬ ಬರಹಗಾರನಾಗಿ ರೂಪುಗೊಳ್ಳುತ್ತಲೇ ಇರಲಿಲ್ಲವೇನೋ ಎನ್ನುವ ಯಕ್ಷಪ್ರಶ್ನೆ ಯಾವಾಗಲೂ ಮೂಡುತ್ತದೆ. ಬಾನಂಗಳದಲ್ಲಿ ಮೇಘವು ಸಂಚರಿಸಿದಂತೆ ನನ್ನೊಳಗಿನ ಕವಿ ಮನಸ್ಸಿಗೆ, ನನ್ನೊಳಗಿನ ಯೋಚನೆಗೆ, ನನ್ನೊಳಗಿನ ಭಾವನೆಗೆ ಸ್ಪಂದಿಸಿದ ನಿಮ್ಮಯ ಮನಸ್ಸು ಅಮೂಲ್ಯ. ಯುವ ಬರಹ ಮನಸುಗಳಿಗೆ ನೀವೆಂದೂ ಸ್ಫೂರ್ತಿ.

Advertisement

-ಗಿರೀಶ್‌ ಪಿ.ಎಂ.

ವಿ.ವಿ.ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next