ಹರಿಹರ: ಮಧ್ಯ ಕರ್ನಾಟಕದಲ್ಲೇ ಪ್ರಸಿದ್ಧವಾದ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಶುಕ್ರವಾರ ಶ್ರದ್ಧೆ, ಭಕ್ತಿ, ಸಡಗರದಿಂದ ನೆರವೇರಿತು. ಬೆಳಗ್ಗೆ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಆಗಮಿಸಿದ ರಥ ಶಿವಮೊಗ್ಗ ವೃತ್ತದವರೆಗೆ ಸಾಗಿ ದೇವಸ್ಥಾನಕ್ಕೆ ವಾಪಾಸಾಯಿತು.
ಸಾವಿರಾರು ಭಕ್ತಜನರು ಗೋವಿಂದಾ… ಗೋವಿಂದಾ…, ಹರ ಹರ ಮಹಾದೇವ್ ಎಂದು ಉದ್ಘೋಷಗಳನ್ನು ಕೂಗುತ್ತಾ ರಥ ಎಳೆದರು. ಕೆಲವರು ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ಮಹಿಳೆಯರು ಉದ್ದ ಸಾಲಿನಲ್ಲಿ ನಿಂತು, ಪುರಾಣ ಪ್ರಸಿದ್ಧ ಹರಿಹರೇಶ್ವರನ ದರ್ಶನ ಪಡೆದು, ಹೂ, ಹಣ್ಣು, ಕಾಯಿ ಸಮರ್ಪಿಸಿದರು. ಮಾಜಿ ಶಾಸಕ ಬಿ.ಪಿ.ಹರೀಶ್, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್, ನಗರಸಭೆ ಅಧ್ಯಕ್ಷೆ ಆಶಾ ಎಂ.ರಾವ್, ತಹಶೀಲ್ದಾರ್ ಜಿ.ನಳಿನ, ದೇವಸ್ಥಾನದ ಕಾರ್ಯದರ್ಶಿ ಎಚ್.ವೆಂಕಟೇಶ್, ಮುಜರಾಯಿ ಶಿರಸ್ತೆದಾರ ಎಚ್.ಬಿ.ಹಾಲೇಶ್, ಕಾರ್ಯ ನಿರ್ವಾಹಕಿ ಸಂಗೀತಾ ಕೆ. ಜೋಶಿ, ಶಾನಭೋಗರಾದ ಎಸ್.ಗಣಪತಿರಾವ್, ಎಚ್.ಗಿರೀಶ್, ಪಟೇಲರಾದ ಜಿ.ಚನ್ನಬಸಪ್ಪ, ಗುರುಪ್ರಸಾದ್, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ದೇವಸ್ಥಾನದ ಸಮೀಪದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಕ್ತ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬಿಸಿಲಿನ ಧಗೆ ತಣಿಸಲು ಮಜ್ಜಿಗೆ, ಶರಬತ್ ಸಹ ವಿತರಿಸಲಾಯಿತು. ಶಿಬಾರಾ ವೃತ್ತದಲ್ಲೂ ಸಹ ಶಿಬಾರ ಸಮಿತಿ ವತಿಯಿಂದ ಮೈಲಾರ ಲಿಂಗೇಶ್ವರ ಜಾತ್ರೆಗೆ ತೆರಳುವ ಭಕ್ತರು ಹಾಗೂ ಹರಿಹರೇಶ್ವರ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಫೆ.11ರಂಧು ಬೆಳಗ್ಗೆ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ಸ್ಥಾಪಿತ ದೇವತಾ ಪೂಜೆ, ನಾಂದಿ ಕಂಕಣ ವಿಸರ್ಜನೆ ಪೂಜೆ, ಧ್ವಜ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳುವವು. ರಥೋತ್ಸವ ನಿಮಿತ್ತ ದೇವಸ್ಥಾನ ರಸ್ತೆಯಲ್ಲಿ ಖಾರಾ ಮಂಡಕ್ಕಿ, ಬೆಂಡು, ಬತಾಸೆ, ಮಕ್ಕಳ ಆಟಿಕೆ, ಬಳೆ ಸೇರಿದಂತೆ ಮಹಿಳೆಯರ ಅಲಂಕಾರಿಕ ವಸ್ತುಗಳ ನೂರಾರು ಅಂಗಡಿಗಳು ತಲೆಎತ್ತಿದ್ದು, 3 ದಿನ ಜಾತ್ರಾ ಸಡಗರ ನಡೆಯಲಿದೆ.