ಕಾಳಗಿ: ಸಮೀಪದ ಶ್ರೀಕ್ಷೇತ್ರ ರೇವಗ್ಗಿ ಗುಡ್ಡದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ನಿಮಿತ್ತವಾಗಿ ಶುಕ್ರವಾರ ಸಾಯಂಕಾಲ ಅಪಾರ ಭಕ್ತ ಸಮೂಹದ ಮಧ್ಯೆ ರೇವಣಸಿದ್ದೇಶ್ವರರ ಭವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ನಿಮಿತ್ತವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗಿನಿಂದಲೇ ವಿವಿಧೆಡೆಯಿಂದ ಆಗಮಿಸಿ ಭಕ್ತರು ರೇವಣಸಿದ್ದೇಶ್ವರ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ರೇವಗ್ಗಿ ಗ್ರಾಮದ ಸುಭಾಷಚಂದ್ರ ದೇವರಮನಿ ಅವರ ಮನಿಯಿಂದ ಕುಂಭದ ಮೇರವಣಿಗೆ ಹಾಗೂ ರೇವಗ್ಗಿ, ರಟಕಲ್, ಮುಕರಂಬಾ, ಗೊಣಗಿ, ಮಾವಿನಸೂರ, ಅರಣಕಲ್, ಕಂದಗೂಳ, ಬೆಡಸೂರ ಗ್ರಾಮಗಳಿಂದ ನಂದಿಕೋಲು ಮತ್ತು ಕಳಶ, ಮಿಣಿಯನ್ನು ಝೇಂಕಾರ, ಡೊಳ್ಳು ಭಾಜಾ ಭಜಂತ್ರಿಗಳ ಮಧ್ಯೆ ಮೇರವಣಿಗೆಯ ಮೂಲಕ ದೇವಸ್ಥಾನ ತಲುಪಿತು.
ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ರಥವು ಸ್ಥಳ ಬಿಡುತ್ತಿದ್ದಂತೆ ನೆರೆದ ಭಕ್ತರೆಲ್ಲರು ರೇವಣಸಿದ್ದೇಶ್ವರ ಮಾರಾಜಕೀ ಜೈ ಎಂಬ ಜಯಘೋಷಗಳನ್ನು ಕೂಗುತ್ತಾ ಉತ್ತತ್ತಿ ನಾರು, ಬಾಳೆಹಣ್ಣು, ನಾಣ್ಯಗಳನ್ನು ರಥದತ್ತ ಎಸೆದು ಭಕ್ತಿಯನ್ನು ಸಮರ್ಪಿಸಿದರು.
ರಟಕಲ್ ಹಿರೇಮಠದ ಪೂಜ್ಯ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ರೇವಣಸಿದ್ಧ ಶಿವಾಚಾರ್ಯರು, ಪೂಜ್ಯ ವೀರಭದ್ರ ಶಿವಾಚಾರ್ಯರು, ಹಿಪ್ಪರಗಿ ಸಿದ್ದಲಿಂಗ ಶಿವಾಚಾರ್ಯರು, ಚಿಮ್ಮಾಯಿದಲಾಯಿಯ ವಿಜಯ ಮಹಾಚಿತೇಶ್ವರ ಸ್ವಾಮೀಜಿ, ಸೆಡಂನ ಸದಾಶಿವ ಸ್ವಾಮೀಜಿ, ಕಾಳಗಿ ಶಿವಬಸವ ಶಿವಾಚಾರ್ಯರು, ಅಫಜಲಪುರದ ಶಾಂತವೀರ ಸ್ವಾಮೀಜಿ, ಚೆನ್ನಬಸವ ದೇವರು, ಸೂಗುರ ಶಿವಾನಚಿದ ದೇವರು,
ಡೊಣ್ಣುರ ಪ್ರಶಾಂತ ದೇವರು, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಶಾಸಕ ಡಾ| ಉಮೇಶ ಜಾಧವ್, ರಾಜೇಶ ಗುತ್ತೇದಾರ, ಅಮರನಾಥ ಪಾಟೀಲ, ಸುವರ್ಣಾ ಮಲಾಜಿ, ಸಂಜೀವನ್ ಯಾಕಪುರ, ಜಗನಗೌಡ ರಾಮತೀರ್ಥ, ರೇಣುಕಾ ಚವ್ಹಾಣ, ಜಗದೇವ ಗುತ್ತೇದಾರ, ತಿಪ್ಪಣಪ್ಪ ಕಮಕನೂರ, ರೆವಣಸಿದ್ದಪ್ಪ ಸಾತನೂರ ಮತ್ತಿತರರು ಪಾಲ್ಗೊಂಡಿದ್ದರು.