ಬೆಂಗಳೂರು: ದಕ್ಷಿಣ ಭಾರತವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಭಾರತದಲ್ಲಿ ಐಸಿಸ್ ಪ್ರಾಂತ್ಯ ಸ್ಥಾಪನೆ, ತರಬೇತಿ, ಉಗ್ರ ಚಟುವಟಿಕೆ ಜತೆಗೆ ತಮಿಳುನಾಡಿನ ಹಿಂದೂ ಮುಖಂಡನ ಹತ್ಯೆ ಹಾಗೂ ಕರ್ನಾಟಕದಲ್ಲೂ ಹಿಂದೂನಾಯಕರ ಹತ್ಯೆಗೆ ಸಂಚು ರೂಪಿಸಲು ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ವಾಸವಗಿದ್ದ ಶಂಕಿತರು ಸೇರಿದಂತೆ 12 ಮಂದಿ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮಂಗಳವಾರ ಚೆನ್ನೈ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಮೊಹಮ್ಮದ್ ಹನೀಫ್ ಖಾನ್, ಇಮ್ರಾನ್ ಖಾನ್, ಮೊಹಮ್ಮದ್ ಝೈದ್, ಇಜಾಜ್ ಪಾಷಾ, ಹುಸೇನ್ ಷರೀಫ್, ಕ್ವಾಜಾ ಮೊಹಿದ್ದೀನ್, ಮೆಹಬೂಬ್ ಪಾಷಾ, ಅಬ್ದುಲ್ ರೆಹಮಾನ್, ಲಿಕಾಯತ್ ಅಲಿ (ಬೆಂಗಳೂರಿನಲ್ಲಿದ್ದವರು) ಮತ್ತು ಪಂಚಿಯಪ್ಪನ್, ಎ.ರಾಜೇಶ್, ಅಬ್ರಾಸನ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಶಂಕಿತರು 2019ರಲ್ಲಿ ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಹತ್ಯೆ ಬಳಿಕ ಬೆಂಗಳೂರಿಗೆ ಬಂದು ಸುದ್ದಗುಂಟೆಪಾಳ್ಯ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕ್ವಾಜಾ ಮುಯಿದ್ದೀನ್ ಅಲಿಯಾಸ್ ಜಲಾಲ್ ತನ್ನ ಸಹಚರರ ಜತೆ ಸೇರಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹಲವು ಬಾರಿ ಸಭೆ ನಡೆಸಿದ್ದರು. ಕೋಮು- ಗಲಭೆ ಹಾಗೂ ದೇಶ ವಿರೋಧಿ ಚಟುವಟಿಕೆ ನಡೆಸಲು ಮುಂಬೈ, ದೆಹಲಿಯಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ನಕಲಿ ದಾಖಲೆ ನೀಡಿ ಸಿಮ್ ಕಾರ್ಡ್ ಗಳನ್ನು ಬಳಸಿದ್ದರು. ಅದೇ ರೀತಿ ಹಲವು ಸಿಮ್ ಗಳನ್ನು ಪಡೆದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖೀಸಿದ್ದಾರೆ.
ಅಲ್ಲದೆ, ಮೆಹಬೂಬ್ ಪಾಷಾ, ಕ್ವಾಜಾ ಮೊಹಿದ್ದೀನ್ ಹಾಗೂ ಇತರರು ನೇರವಾಗಿ ವಿದೇಶದಲ್ಲಿರುವ ಐಸಿಸ್ ಶಂಕಿತರ ಜತೆ ನೇರವಾಗಿ ಸಂಪರ್ಕದಲ್ಲಿದ್ದರು. ಅವರಿಂದಲೇ ಅಕ್ರಮವಾಗಿ ಶಸಾOಉಸOಉ ತರಿಸಿಕೊಳ್ಳುತ್ತಿದ್ದರು. ಮೆಹಬೂಬ್ ಪಾಷಾ ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಕಟ್ಟಬೇಕೆಂದು ನಿರ್ಧರಿಸಿದ್ದ. ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿತ್ತು.
ಜನವರಿ ತಿಂಗಳಲ್ಲಿ ದಾಳಿ: ಶಂಕಿತರು ನಗರದಲ್ಲಿ ನೆಲೆಸಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು ಮತ್ತು ತಮಿಳುನಾಡಿ ಕ್ಯೂ ಬ್ರಾಂಚ್ ಪೊಲೀಸರು ಸುದ್ದಗುಂಟೆ ಠಾಣಾ ವ್ಯಾಪ್ತಿಯ ಗುರಪ್ಪನ ಪಾಳ್ಯದ ಬಾಡಿಗೆ ಮನೆ ಜನವರಿ ತಿಂಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ 12ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿದ್ದರು. ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ.