ಅಫಜಲಪುರ: ತಾಲೂಕಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಕೋಲಿ ಸಮಾಜದ ಅಧ್ಯಕ್ಷರ ನೇಮಕದಲ್ಲಿ ಸಂಘದ ನಿಯಮ ಉಲ್ಲಂಘಿಸಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಶಂಕು ಮ್ಯಾಕೇರಿ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 40 ಸಾವಿರಕ್ಕೂ ಹೆಚ್ಚು ಕೋಲಿ ಸಮಾಜಬಾಂಧವರಿದ್ದೇವೆ. ಎಲ್ಲರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 2017ರಲ್ಲಿ ಕೋಲಿ ಸಮಾಜ ಸಂಘಟನೆ ಕಟ್ಟಿ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸಂಘಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ, ಆದರೆ ಸಂಘದ ನಿಯಮಾವಳಿಗಳನ್ನು ಧಿಕ್ಕರಿಸಿ ಕೆಲವರು ಕೂಡಕೊಂಡು ಹೊಸ ಅಧ್ಯಕ್ಷರ ನೇಮಕ ಮಾಡಿಕೊಂಡಿದ್ದಾರೆ. ಸಂಘದ ಪದಾಧಿಕಾರಿಗಳಿಗೂ ಸಹಮತವಿಲ್ಲ. ಸಮಾಜ ಬಾಂಧವರ ಸಭೆ ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಆ ಮೇಲೆ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯಲಿ ಎಂದರು.
ಮುಖಂಡ ಅಂಬಣ್ಣ ನರಗೋ ಮಾತನಾಡಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ, ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆ ನಾವು ಒಪ್ಪುವುದಿಲ್ಲ. ಸಮಾಜದ ಹಿತದೃಷ್ಟಿಯಿಂದ ಮುಂದಿನ ಅಧ್ಯಕ್ಷರ ನೇಮಕವನ್ನು ಚುನಾವಣೆಯ ಮೂಲಕ ನಡೆಸಲಾಗುತ್ತದೆ. ಅಲ್ಲಿಯ ತನಕ ಶಂಕು ಮ್ಯಾಕೇರಿ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ದಿಲೀಪ್ ಕಳಸಿ, ಸಿದ್ದಪ್ಪ ಸಿನ್ನೂರ, ಮಹಾಂತೇಶ ತಳವಾರ, ದತ್ತು ಘಾಣುರ, ಸುರೇಶ ಕಲ್ಲೂರ, ಅವಧೂತ ಬನ್ನಟ್ಟಿ, ಬಸವರಾಜ ಜಮಾದಾರ, ಲಿಂಗಣ್ಣ ಭಂಗಿ, ಸಿದ್ರಾಮ ಗೊಬ್ಬೂರ ಇದ್ದರು.