Advertisement

ಮೂಕ ಪ್ರಾಣಿಗಳ ಚಿಕಿತ್ಸೆಗೂ ಶುಲ್ಕ: ಆಕ್ರೋಶ

04:06 PM Aug 28, 2021 | Team Udayavani |

ರಾಮನಗರ: ರಾಜ್ಯದ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಪ್ರಾಣಿಗಳಿಗೆ ಕನಿಷ್ಠ ದರ ಚಿಕಿತ್ಸಾ ಶುಲ್ಕ ನಿಗದಿ ಸೇರಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿವಿಧ ಸೇವೆಗಳಿಗೆ ದರ ನಿಗದಿಪಡಿಸುವ ವಿಚಾರದಲ್ಲಿ ವರದಿ ನೀಡುವಂತೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಿಗೆ ಇಲಾಖೆಯ ನಿರ್ದೇಶಕರು ಪತ್ರ ಬರೆದಿದ್ದಾರೆ.

Advertisement

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ವಿಚಾರದಲ್ಲಿ ಸಭೆ ನಡೆಸಿದ್ದು, ಪ್ರಾಣಿಗಳ ಚಿಕಿತ್ಸೆಗೆ ಕನಿಷ್ಠ ದರದ ಶುಲ್ಕ ನಿಗದಿಪಡಿಸುವ ಬಗ್ಗೆ ಜಿಲ್ಲಾ ಹಂತದ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಸರ್ಕಾರದ ಈ ಉದ್ದೇಶಕ್ಕೆ ರೈತಾಪಿ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.

ಮೂಕ ಪ್ರಾಣಿಗಳ ಚಿಕಿತ್ಸೆಗೂ ಶುಲ್ಕ ಪಾವತಿಸಬೇಕೆ ಎಂದು ರೈತರು ಪ್ರಶ್ನಿಸಿದ್ದಾರೆ.ಹಸು, ದನ, ಎಮ್ಮೆ, ಕುರಿ, ಮೇಕೆ,ಹಂದಿ, ಕೋಳಿ, ಬಾತು ಕೋಳಿ, ಮೊಲ ಸೇರಿ ಎಲ್ಲಾ ಪ್ರಾಣಿ, ಪಕ್ಷಿಗಳಿಗೆ ಪ್ರತ್ಯೇಕ ಚಿಕಿತ್ಸೆಗೆ ಕನಿಷ್ಠ ಶುಲ್ಕ ನಿಗದಿ ಮಾಡಲು ಯೋಚಿಸುವ ಪರಿಯೇ ಸರಿಯಲ್ಲ. ಇಷ್ಟು ಸಾಲದೆಂಬಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಸೇವೆಗಳಿಗೂ ಶುಲ್ಕ ನಿಗದಿಪಡಿಸಲು ಸರ್ಕಾರ ಉದ್ದೇಶಿ ಸಿರುವುದನ್ನು ಗ್ರಾಮೀಣ ಭಾಗದ ಜನತೆ ಖಂಡಿಸಿದ್ದಾರೆ.

ಪಶುವೈದ್ಯ ಸಂಸ್ಥೆಗಳಲ್ಲಿ ಎಚ್‌.ಎಫ್.ಜರ್ಸಿ, ಅಮೃತ ಮಹಲ್‌ ಮುಂತಾದ ತಳಿಗಳ ಘನೀಕೃತ ವೀರ್ಯ ನಳಿಕೆಗಳಿಗೆ ತಲಾ 15 ರೂ.ನಂತೆ ಸೇವಾ ಶುಲ್ಕವನ್ನು ಮಾತ್ರ ಪಶು ವೈದ್ಯ ಇಲಾಖೆ ಪಡೆಯುತ್ತಿದೆ. ಉಳಿದೆಲ್ಲ ಸೇವೆ ಉಚಿತವಾಗಿ ಲಭಿಸುತ್ತಿದೆ.

ಇದನ್ನೂ ಓದಿ:ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಸುರಕ್ಷತಾ ಕಾರ್ಯ ಕೈಗೊಳ್ಳಿ : ನಟ ಚೇತನ್  

Advertisement

ಹಸು, ದನ, ಎಮ್ಮೆ, ಮೇಕೆ ಸಾಕಾಣಿಕೆಯನ್ನು ರೈತರು ತಮ್ಮ ಉಪಕಸುಬನ್ನಾಗಿ ಸ್ವೀಕರಿಸಿದ್ದು, ಕುಟುಂಬದ ಆರ್ಥಿಕತೆಗೆ ಸಹಕಾರಿಯಾಗಿದೆ. ಇದೀಗ ಸರ್ಕಾರ ಈ ಪ್ರಾಣಿಗಳ ಚಿಕಿತ್ಸೆಗೂ ದರ ನಿಗದಿಪಡಿಸಿದರೆ ಗಾಯದ ಮೇಲೆ ಬರೆ ಎಳೆದಂತೆ ಎಂದು ಗ್ರಾಮೀಣ ಭಾಗದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಮಾತ್ರವಲ್ಲದೆ ಪ್ರಾಣಿಗಳ ಚಿಕಿ ತ್ಸೆಗೆ ದರ ನಿಗದಿ ಪಡಿಸುವ ಸರ್ಕಾರದ ಚಿಂತನೆಗೆ ಪಶು ಇಲಾಖೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಕಾಯ್ದೆ ಸೇರಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತ ವಿರೋಧಿ ಧೋರಣೆ ತಳೆದಿರುವಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಗೆ ಮೀಟರ್‌ ಅಳವಡಿಸಲು ಉದ್ದೇಶಿಸಿದೆ. ಇದೀಗ ಪಶುಗಳ ಚಿಕಿತ್ಸೆಗೂ ಶುಲ್ಕ ನಿಗದಿ ಪಡಿಸಲು
ಮುಂದಾಗಿರುವುದು ಸರಿಯಲ್ಲ.
-ಚೀಲೂರು ಮುನಿರಾಜು, ಜಿಲ್ಲಾಧ್ಯಕ್ಷ, ರಾಜ್ಯ ರೈತಸಂಘ.

ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆಗಾಗಿ ಬರುವ ಪ್ರಾಣಿಗಳಿಗೆ ಕನಿಷ್ಠ ದರ ಚಿಕಿತ್ಸಾ ಶುಲ್ಕ ನಿಗದಿ ಪಡಿಸುವ ವಿಚಾರದಲ್ಲಿ ಇಲಾಖೆಯ
ಹಿರಿಯ ಅಧಿಕಾರಿಗಳು ವರದಿ ಕೇಳಿದ್ದಾರೆ. ಜಿಲ್ಲೆಯ ನಾಲ್ಕು ತಾಲೂಕುಗಳ ಪಶು ವೈದ್ಯರಿಂದ ಅಭಿಪ್ರಾಯ ಪಡೆದು ವರದಿಯನ್ನು ಸಲ್ಲಿಸ ಬೇಕಾಗಿದೆ.
-ಡಾ.ತಿರುಮಲೆಗೌಡ, ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು
ವೈದ್ಯಕೀಯ ಸೇವಾ ಇಲಾಖೆ, ರಾಮನಗರ

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next