ಇತ್ತೀಚೆಗಷ್ಟೇ ಗಾಯಕ ನವೀನ್ ಸಜ್ಜು ಹಾಡಿರುವ “ಬಡ್ಡೀ ಮಗನ್ ಲೈಫು’ ಚಿತ್ರದ “ಏನ್ ಚಂದನೋ ತಕ್ಕೋ’ ಎಂಬ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾಗುತ್ತಿದ್ದಂತೆ, ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ವೈರಲ್ ಆಗಿ ಹರಿದಾಡುತ್ತಿದೆ. ಒಂದೆಡೆ ಈ ಗೀತೆ ಜನಪ್ರಿಯವಾಗುತ್ತಿದ್ದಂತೆ, ಮತ್ತೂಂದೆಡೆ ಈ ಗೀತೆಯ ವಿರುದ್ಧ ಒಕ್ಕಲಿಗರ ಸಮುದಾಯದ ಹೆಣ್ಣು ಮಕ್ಕಳನ್ನು ತೇಜೋವಧೆ ಮಾಡಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.
ಅಲ್ಲದೆ ಈ ಹಾಡಿಗೆ ಧ್ವನಿಯಾಗಿರುವ ಗಾಯಕ ನವೀನ್ ಸಜ್ಜು ಮತ್ತು ಚಿತ್ರತಂಡ ಕ್ಷಮೆ ಕೋರಬೇಕು ಎಂದು ಒಕ್ಕಲಿಗ ಸಮುದಾಯದ ಮಹಿಳಾ ಸಂಘಟನೆಗಳು ಆಗ್ರಹಿಸಿವೆ. ಇನ್ನು ಈ ಆರೋಪಕ್ಕೆ ಧ್ವನಿಗೂಡಿಸಿರುವ ನಿರ್ಮಾಪಕ ಬಾ.ಮಾ ಹರೀಶ್, ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಚಿತ್ರತಂಡದ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ಹಾಡಿನ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಗಾಯಕ ನವೀನ್ ಸಜ್ಜು, “ಮೊದಲನೆಯದಾಗಿ ನಾನು ಈ ಚಿತ್ರಕ್ಕೆ ಗಾಯಕ ಅಷ್ಟೇ.
ಸಂಗೀತ ನಿರ್ದೇಶಕರು, ನಿರ್ದೇಶಕರು ಹೇಳಿದ ಸನ್ನಿವೇಶವನ್ನು ಅರ್ಥೈಸಿಕೊಂಡು ಹಾಡನ್ನು ಹಾಡಿದ್ದೇನೆ. ಅವರು ಹೇಳಿದಂತೆ ಚಿತ್ರದ ಸನ್ನಿವೇಶದಲ್ಲಿ ನನಗೆ ಅಂಥ ಯಾವುದೇ ಅವಹೇಳನಕಾರಿ ಅಂಶಗಳು ಕಾಣಲಿಲ್ಲ. ಅಲ್ಲದೆ ಸುಮಾರು ಆರು ತಿಂಗಳ ಹಿಂದಷ್ಟೇ ಈ ಹಾಡಿನ ಫೀಮೇಲ್ ವರ್ಶನ್ ಕೂಡ ಬಿಡುಗಡೆಯಾಗಿದೆ. ಈಗಾಗಲೇ ಈ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ಕೂಡ ಸಿಕ್ಕಿದೆ. ಈಗ ಚಿತ್ರದ ಮೇಲ್ ವರ್ಶನ್ ಬಿಡುಗಡೆಯಾಗಿದೆ ಅಷ್ಟೇ. ಇನ್ನೇನು ಚಿತ್ರ ಬಿಡುಗಡೆಯಾಗಬೇಕು ಎಂಬ ಹಂತದಲ್ಲಿ ಈ ಹಾಡಿನ ಬಗ್ಗೆ ಈ ಥರದ ಆರೋಪ ಏಕೆ ಬರುತ್ತಿದೆಯೋ ಗೊತ್ತಿಲ್ಲ’ ಎಂದಿದ್ದಾರೆ.
ಅಂದ್ಹಾಗೆ “ಬಡ್ಡೀ ಮಗನ್ ಲೈಫು’ ಚಿತ್ರದಲ್ಲಿ ಬರುವ ಸನ್ನಿವೇಶವೊಂದರಲ್ಲಿ ಹುಡುಗಿಯೊಬ್ಬಳು ಲವ್ ಮಾಡಿ ಓಡಿ ಹೋದರೆ, ಅವಳ ಅಕ್ಕ-ಪಕ್ಕದ ಮನೆಯ ಹೆಂಗಸರು ಅದನ್ನು ಹೇಗೆ ಆಡಿಕೊಳ್ಳುತ್ತಾರೆ ಎನ್ನುವುದನ್ನು ಈ ಹಾಡಿನ ಮೂಲಕ ಹೇಳಲಾಗಿದೆಯಂತೆ. “ಸಿನಿಮಾದ ಕಥೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹಾಡಿದೆ. ಇಲ್ಲಿ ಹೆಣ್ಣು ಮಕ್ಕಳ ತೇಜೋವಧೆ ಆಗಿಲ್ಲ. ಗೌಡ್ರು ಅಂದ್ರೆ ಊರಿನ ಮುಖ್ಯಸ್ಥ, ಯಜಮಾನ, ಊರಿನಲ್ಲಿರುವ ದೊಡ್ಡವರು ಎಂಬ ಅರ್ಥವಿದೆ. ಗೌಡ್ರು ಅಂದ್ರೆ ಕೇವಲ ಒಕ್ಕಲಿಗರು ಮಾತ್ರವಲ್ಲ. ಎಲ್ಲಾ ಸಮುದಾಯದಲ್ಲೂ ಗೌಡ್ರು ಇರುತ್ತಾರೆ.
ಅದೊಂದು ದೊಡ್ಡ ಅಂತಸ್ತಿರುವವರನ್ನು ಸೂಚಿಸುವ ಪದ. ಇಲ್ಲಿ ಯಾರಿಗೂ ಅವಮಾನ ಮಾಡುವ ಉದ್ದೇಶ ನಮಗಿಲ್ಲ’ ಎನ್ನುವ ಸಮರ್ಥನೆಯ ಉತ್ತರ ನೀಡುತ್ತಾರೆ ನವೀನ್ ಸಜ್ಜು. ಇನ್ನು “ಬಡ್ಡೀ ಮಗನ್ ಲೈಫು’ ಚಿತ್ರದ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಹಾಡಿಗೆ ಸಂಗೀತ ಸಂಯೋಜಿಸಿದ್ದು, ವೀರು ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಪವನ್ ಪ್ರಸಾದ್ ನಿರ್ದೇಶನವಿದೆ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ “ಬಡ್ಡೀ ಮಗನ್ ಲೈಫು’ ಚಿತ್ರದ ವಿರುದ್ದ ಕೇಳಿಬಂದಿರುವ ಇಂಥದ್ದೊಂದು ಆರೋಪ, ಚಿತ್ರತಂಡಕ್ಕೆ ತಲೆನೋವು ತಂದಿರುವುದಂತೂ ಸುಳ್ಳಲ್ಲ.