Advertisement

ಕೈ ವಿರುದ್ಧ ಮನೆ ಮನೆಗೆ ಬಿಜೆಪಿ ಆರೋಪ ಪಟ್ಟಿ: ಬಿಎಸ್‌ವೈ

07:35 AM Aug 30, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ದಾಖಲೆಗಳ ಸಹಿತ ಆರೋಪಪಟ್ಟಿ ಬಿಡುಗಡೆ ಮಾಡಲು ಮುಂದಾಗಿರುವ ಬಿಜೆಪಿ, ಈ ಮಾಹಿತಿ ಯನ್ನು ಮನೆ ಮನೆಗಳಿಗೆ ಹಂಚಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಎಲ್ಲಾ ದಾಖಲೆ ಗಳನ್ನು ಒಳಗೊಂಡಂತೆ ಮಾಹಿತಿ  ಗಳನ್ನು ಸಂಗ್ರಹಿಸಲಾಗುತ್ತಿದ್ದು, ಈ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಶೀಘ್ರವೇ ಅವುಗಳನ್ನು ಕ್ರೋಢೀಕರಿಸಿ ಆರೋಪಪಟ್ಟಿ ಮುದ್ರಣ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದ ಭೂ ಹಗರಣ, ಸರ್ಕಾರದ ಖಜಾನೆ ಲೂಟಿ ಮಾಡಿ ಹಗಲು ದರೋಡೆ ಮಾಡಿರುವುದು, ಖಜಾನೆಯ ದುರುಪಯೋಗ, ಸಚಿವರಿಂದ ಬೆಲೆಬಾಳುವ ಭೂಮಿ ಕಬಳಿಕೆ ಸೇರಿದಂತೆ ಸರ್ಕಾರದ ಅಕ್ರಮಗಳ ಎಲ್ಲಾ ಸಂಗತಿಗಳು ಈ ಆರೋಪ ಪಟ್ಟಿಯಲ್ಲಿರುತ್ತದೆ ಎಂದು ತಿಳಿಸಿದರು. ಆರೋಪಪಟ್ಟಿಯನ್ನು ರಾಜ್ಯಾದ್ಯಂತ ಮನೆ ಮನೆಗಳಿಗೆ ತಲುಪಿಸುವುದರ ಜತೆಗೆ ಇಷ್ಟೊಂದು ಅಕ್ರಮ ಎಸಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಹಕ್ಕಿಲ್ಲ, ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟವನ್ನೂ ಆಯೋಜಿಸ ಲಾಗುವುದು. ನಾಲ್ಕಾರು ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಗಳನ್ನು ನಿರ್ಧರಿಸಿ ಪ್ರಕಟಿಸಲಾಗುವುದು ಎಂದರು.

ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ರಥಯಾತ್ರೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಯಡಿಯೂರಪ್ಪ, ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಭವ್ಯ ಕರ್ನಾಟಕ ನಿರ್ಮಾಣದ ಪರಿಕಲ್ಪನೆ ಮುಂದಿಟ್ಟುಕೊಂಡು ರಥಯಾತ್ರೆ ಮಾಡುತ್ತಿದ್ದೇವೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಕರ್ನಾಟಕ ಹೇಗಿರಬೇಕು ಮತ್ತು ಅದಕ್ಕೆ ಏನು ಮಾಡಬೇಕು ಎಂಬುದು ಇದರ ಉದ್ದೇಶ. ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next