Advertisement

ಬೆಳ್ಳಗಾಯಿತು ಇದ್ದಿಲು 

06:00 AM Dec 13, 2018 | |

ಹಾಲು ಮಾರುವವ “ನನ್ನ ಬಳಿ ಒಂದು ಲೀಟರ್‌ ಹಾಲು ಕೊಂಡುಕೊಂಡು ಅದರಿಂದ ಇದ್ದಿಲನ್ನು ಚೆನ್ನಾಗಿ ತೊಳೆಯಬೇಕು. ಆಗ ಇದ್ದಿಲು ಬೆಳ್ಳಗಾಗುತ್ತೆ’ ಎಂದ. ಶಂಭು ಅವನ ಮಾತಿನಂತೆ ಇದ್ದಿಲನ್ನು ಹಾಲಿನಿಂದ ತೊಳೆದರೂ ಕಪ್ಪು ಬಣ್ಣ ಹೋಗಲಿಲ್ಲ. 

Advertisement

ಒಂದಾನೊಂದು ಊರಿನಲ್ಲಿ ಶಂಭು ಎಂಬ ಒಬ್ಬ ಯುವಕನಿದ್ದ. ಆತ ಸ್ವಲ್ಪ ಮಂಕು ಸ್ವಭಾವದವನಾಗಿದ್ದ. ಏನಾದರೂ ಕೆಲಸ ಶುರುಹಚ್ಚಿಕೊಂಡರೆ ಮುಗಿಸುವವರೆಗೂ ಸುಮ್ಮನಿರುತ್ತಿರಲಿಲ್ಲ. ಒಂದು ದಿನ ದಾರಿಯಲ್ಲಿ ಅವನು ಇದ್ದಿಲನ್ನು ನೋಡಿದ. ಅವನಿಗೆ ಕಪ್ಪಗಿದ್ದ ಇದ್ದಿಲನ್ನು ನೋಡಿ ಅಯ್ಯೋ ಎನಿಸಿತು. ಅದನ್ನು ಹೇಗಾದರೂ ಮಾಡಿ ಬೆಳ್ಳಗಾಗಿಸಬೇಕೆಂಬ ಯೋಚನೆ ಅವನಲ್ಲಿ ಮೂಡಿತು. 

ಎದುರಿನಲ್ಲಿ ಓರ್ವ ಗೌಳಿಗ(ಹಾಲು ಮಾರುವವ) ಸಿಕ್ಕ. ಶಂಭು ಅವನನ್ನೇ “ಇದ್ದಿಲನ್ನು ಬೆಳ್ಳಗೆ ಮಾಡುವುದು ಹೇಗೆ?’ ಎಂದು ಕೇಳಿದ. ಅವನಂದ “ನನ್ನ ಬಳಿ ಒಂದು ಲೀಟರ್‌ ಹಾಲು ಕೊಂಡುಕೊಂಡು. ಅದರಿಂದ ಚೆನ್ನಾಗಿ ತೊಳೆಯಬೇಕು. ಆಗ ಇದ್ದಿಲು ಬೆಳ್ಳಗಾಗುತ್ತೆ’. ಅವನ ಮಾತಿನಂತೆ ಹಾಲಿನಿಂದ ಇದ್ದಿಲು ತೊಳೆದರೂ ಕಪ್ಪು ಹೋಗಲಿಲ್ಲ. ಅದೇ ದಾರಿಯಲ್ಲಿ ಸಾಬೂನು ಮಾರುತ್ತಾ ಒಬ್ಬ ಬಂದ. ಆತ “ಹಾಲಿನಿಂದ ತೊಳೆಯಬೇಡ. ಸಾಬೂನಿನಿಂಜ ತೊಳೆದರೆ ಇದ್ದಿಲು ಬೆಳ್ಳಗಾಗುತ್ತದೆ’ ಎಂದ. ಶಂಭು ಅವನಿಂದ ದುಡ್ಡು ತೆತ್ತು ಸಾಬೂನು ಕೊಂಡುಕೊಂಡ. ಆದರೆ ಸಾಬೂನಿನಿಂದ ಇದ್ದಿಲು ತೊಳೆಯಲು ಶುರುಮಾಡಿದ. ಆದರೆ ಕಪ್ಪು ಬಣ್ಣ ಹೋಗಲಿಲ್ಲ.

ಅದೇ ವೇಳೆಗೆ ಚಿಕ್ಕ ಬೀಸುವ ಕಲ್ಲು ಹಿಡಿದು ಬಂದ ಹೆಂಗಸೊಬ್ಬಳು ಶಂಭುನನ್ನು ನೋಡಿದಳು. ಅವಳಿಗೆಲ್ಲವೂ ಅರ್ಥವಾಯಿತು. ಅವಳು “ಅಯ್ಯೋ ಬೆಪ್ಪುತಕ್ಕಡಿಯೇ. ಸಾಬೂನಿನಿಂದ ಇದ್ದಿಲು ಬೆಳ್ಳಗಾಗುವುದಿಲ್ಲ. ಬೀಸುವ ಕಲ್ಲಿನಲ್ಲಿ ಉಜ್ಜಿದರೆ ಬೆಳ್ಳಗಾಗುತ್ತದೆ.’ ಎಂದಳು. ಶಂಭು ಜೇಬಿನಿಂದ ದುಡ್ಡು ತೆಗೆದು ಬೀಸುವ ಕಲ್ಲನ್ನೂ ಕೊಂಡುಕೊಂಡ. ಬೀಸುವ ಕಲ್ಲಿನಿಂದ ಇದ್ದಿಲನ್ನು ತಿಕ್ಕಿಯೇ ತಿಕ್ಕಿದ. ಇದ್ದಿಲು ಸಣ್ಣಗಾಯಿತೇ ಹೊರತು ಬೆಳ್ಳಗಾಗಲಿಲ್ಲ. ಅವನು ದುಃಖದಿಂದ ತಲೆ ಮೇಲೆ ಕೈ ಹೊತ್ತು ಕೂತ. 

ಅಷ್ಟರಲ್ಲಿ ಬಣ್ಣ ಮಾರುವ ರಂಗಣ್ಣ ಬಂದ. ಶಂಭುವನ್ನು ಕಂಡು “ಯಾಕಣ್ಣ ತಲೆ ಮೇಲೆ ಕೈ ಹೊತ್ತು ಕೂತಿದ್ದೀಯಾ?’ ಎಂದು ಕೇಳಿದ. ಬೆಳಗ್ಗಿನಿಂದ ನಡೆದುದೆಲ್ಲವನ್ನೂ ರಂಗಣ್ಣನಿಗೆ ವಿವರಿಸಿದ. ರಂಗಣ್ಣ “ಬಿಳಿ ಬಣ್ಣವನ್ನು ಹಚ್ಚಿದ್ದರೆ ಸುಲಭವಾಗಿ ಇದ್ದಿಲು ಬಿಳಿಯಾಗುವುದು’ ಎಂದ. ಬೆಳಗ್ಗಿನಿಂದ ಹಣ ಕೊಟ್ಟು ಕೊಟ್ಟು ಶಂಭುವಿನ ಜೇಬು ಖಾಲಿಯಾಗಿತ್ತು. ಪುಡಿಗಾಸು ಮಾತ್ರ ಉಳಿದಿತ್ತು. ಅದಷ್ಟನ್ನೂ ರಂಗಣ್ಣನಿಗೆ ಕೊಟ್ಟು ಬಿಳಿ ಪೇಯಿಂಟನ್ನು ಕೊಂಡುಕೊಂಡ. ಇದ್ದಿಲಿಗೆ ಬಿಳಿ ಬಣ್ಣ ಹಚ್ಚಿದಾಗ, ಬೆಳ್ಳಗಾಯಿತು. ಕಡೆಗೂ ಶಂಭುವಿಗೆ ಸಮಾಧಾನವಾಯಿತು. 

Advertisement

ಕೆಲವು ದಿನ ಕಳೆಯುವುದರಲ್ಲಿ ಬಣ್ಣ ಮಾಸಿ, ಕಿತ್ತು ಹೋಗಿ ಇದ್ದಿಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿತು. ಶಂಭುಗೆ ಬಹಳ ದುಃಖವಾಯಿತು. ಇದ್ದಿಲನ್ನು ಮತ್ತೆ ಬೀಸುವ ಕಲ್ಲಿಗೆ ತಿಕ್ಕ ತೊಡಗಿದ. ಇದನ್ನೆಲ್ಲ ನೋಡುತ್ತಿದ್ದ ತಾಯಿ ತನ್ನ ಮೌನ ಮುರಿದಳು “ಹೀಗೆಲ್ಲಾ ಮಾಡಿದರೆ ಅದು ಬೆಳ್ಳಗಾಗುತ್ತದೆಯೆ? ಲೋಕದಲ್ಲಿ ಎಲ್ಲಾ ಬಣ್ಣಗಳೂ ಬೇಕು. ಆಗಲೇ ಶೋಭೆ. ಇರಲಿ, ನಿನಗೆ ಅದು ಬಿಳಿ ಆಗಬೇಕಲ್ಲವೆ? ಅದನ್ನು ಒಲೆಗೆ ಹಾಕು. ಆಗ ಅದಕ್ಕಿಂತ ಮಿಗಿಲಾದ ಹೊಂಬಣ್ಣವನ್ನು ಪಡೆಯುವುದು’ ಎಂದಳು. 

ಶಂಭು ಅಮ್ಮನ ಮಾತನ್ನು ಪಾಲಿಸಿದ. ಒಲೆಗೆ ಹಾಕಿದ ತಕ್ಷಣ ಇದ್ದಿಲು ನಿಗಿನಿಗಿ ಹೊಳೆಯುವ ಕೆಂಡವಾಯಿತು! ನಂತರ ಬೂದಿಯಾಗಿ ಬಿಳಿ ಬಣ್ಣವನ್ನು ಪಡೆದುಕೊಂಡಿತು. ಶಂಭುವಿಗೆ ಇದ್ದಿಲನ್ನು ಕಡೆಗೂ ಬಿಳಿಯಾಗಿಸಿದ್ದಕ್ಕೆ ಸಂತಸವಾಯಿತು. ಅದರ ಜೊತೆಗೆ ಕಪ್ಪು ಬಣ್ಣ ಎಂದರೆ ಕೀಳರಿಮೆ ಬೇಡ ಎಂಬ ಅಮ್ಮನ ಪಾಠವೂ ಅರ್ಥವಾಗಿತ್ತು.

ವನರಾಗ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next