ನವದೆಹಲಿ:ರಾಜ್ಯ ಕಾಂಗ್ರೆಸ್ ನಲ್ಲಿನ ಬಿಕ್ಕಟ್ಟಿನ ನಡುವೆಯೇ ಸಿಧು ಆಪ್ತ ಚರಣಜಿತ್ ಚನ್ನಿ ಸೋಮವಾರ(ಸೆಪ್ಟೆಂಬರ್ 20) ಪಂಜಾಬ್ ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಚನ್ನಿ ಪಂಜಾಬ್ ನ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ದ್ವಿತೀಯ ಪಿಯು ಫಲಿತಾಂಶ: ಇಲಾಖೆ ಫಲಿತಾಂಶ ತಿರಸ್ಕರಿಸಿದ 36 ವಿದ್ಯಾರ್ಥಿಗಳು ಅನುತ್ತೀರ್ಣ!
ಪಕ್ಷದೊಳಗಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಗುದ್ದಾಟದ ಪರಿಣಾಮ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ (ಸೆ.18) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ ಹೈಕಮಾಂಡ್ ಭಾನುವಾರ ಅಚ್ಚರಿಯ ರೀತಿಯಲ್ಲಿ ದಲಿತ ಸಮುದಾಯದ ಚರಣ್ ಜಿತ್ ಸಿಂಗ್ ಅವರನ್ನು ನೇಮಕ ಮಾಡಿತ್ತು.
ಪ್ರಮಾಣವಚನ ಸಮಾರಂಭದಲ್ಲಿ ಸುಖ್ ಜಿನ್ ದರ್ ಸಿಂಗ್ ರಾಂಧಾವ್ ಹಾಗೂ ಒಪಿ ಸೋನಿ ಅವರು ಪಂಜಾಬ್ ನ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡನನ್ನಾಗಿ ಭಾನುವಾರ ಸಂಜೆ ಚನ್ನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
ಚರಣಜಿತ್ ಚನ್ನಿ ಅವರಿಗೆ ನಿರ್ಗಮಿತ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಹಾಗೂ ನವಜ್ಯೋತ್ ಸಿಂಗ್ ಸಿಧು ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.