ಚಂಡೀಗಢ: ಮಾಜಿ ರಕ್ಷಣಾ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎ.ಟಿ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಕಿರಣ್ ರೆಡ್ಡಿ ಅವರು ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ಗೆ ಪಂಜಾಬ್‌ನಿಂದ ಒಂದು ಆಘಾತಕಾರಿ ಸುದ್ದಿ ಎದುರಾಗಿದೆ. ಮಾಜಿ ಮುಖ್ಯಮಂತ್ರಿ, ದಲಿತ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರು ಕೇಸರಿ ಪಾಳಯ ಸೇರುವ ಊಹೆಗಳು ಹರಿದಾಡತೊಡಗಿವೆ.
ಕಾಂಗ್ರೆಸ್‌ನಿಂದ ಚನ್ನಿ ಅವರನ್ನು ಸಂತೈಸುವ ಪ್ರಯತ್ನದ ಹೊರತಾಗಿಯೂ ಅವರು ಪಂಜಾಬ್‌ನಲ್ಲಿ ಕೆಲವು ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2024ರ ಲೋಕಸಭಾ ಚುನಾವಣೆಗೆ ಒಂದು ವರ್ಷ ಇರುವಾಗಲೇ ಚನ್ನಿ ಬಿಜೆಪಿ ಸೇರ್ಪಡೆ ವಿಚಾರ ಭಾರೀ ಕುತೂಹಲ ಮೂಡಿಸಿದೆ!
ಸಿಧು ಆಗಮನವೇ ಕಾರಣ?: ಪಂಜಾಬ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಜಾಮೀನಿನ ಮೇಲೆ ಪಟಿಯಾಲ ಜೈಲಿನಿಂದ ಹೊರಗೆ ಬಂದಿದ್ದಾರೆ. ಅವರೊಂದಿಗೆ ಚನ್ನಿಗೆ ಮೊದಲಿಂದಲೂ ಭಿನ್ನಮತ ಇದೆ. ಇದೂ ಮೇಲಿನ ಬೆಳವಣಿಗೆ ಕಾರಣವಿರಬಹುದೆನ್ನಲಾಗಿದೆ. ಈಗಾಗಲೇ ಪಂಜಾಬ್ ಕಾಂಗ್ರೆಸ್‌ನಲ್ಲಿ ಹಲವು ಬಣಗಳು ಏರ್ಪಟ್ಟಿವೆ.
ಕೆಲವು ಶಕ್ತಿಕೇಂದ್ರಗಳು ನಿರ್ಮಾಣವಾಗಿವೆ. 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ ಚನ್ನಿ ಅವರು ರಾಜಕೀಯ ಜೀವನದಿಂದ ತುಸು ಹಿಂದೆ ಸರಿದಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಚನ್ನಿ ಅವರ ಸೋದರಳಿಯ ಬಂಧಿತರಾದಾಗ ಅವರ ಮೇಲೆ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆಯಾದ ನಂತರ ಅವರ ಮನೆಗೆ ಚನ್ನಿ ಅನಿರೀಕ್ಷಿತ ಭೇಟಿ ನೀಡುವ ಮೂಲಕ ರಾಜಕೀಯಕ್ಕೆ ಮರುಪ್ರವೇಶ ಪಡೆದರು. ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಚನ್ನಿ ಕಾಣಿಸಿಕೊಂಡಿದ್ದರು. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ವಾದ್ರಾ ಅವರನ್ನು ಭೇಟಿಯಾಗಿದ್ದರು. ಈ ಮೂಲಕ ರಾಜಕೀಯದಲ್ಲಿ ಇನ್ನು ಚಾಲ್ತಿಯಲ್ಲಿರುವ ಸಂದೇಶ ರವಾನಿಸಿದ್ದರು.