ನಿರ್ದೇಶನ ಮಾಡಬೇಕು ಮತ್ತು ತಮ್ಮ ಮಗನನ್ನು ಕನ್ನಡಕ್ಕೆ ಪರಿಚಯಿಸಬೇಕು ಎಂದು ನಟ ಚರಣ್ ರಾಜ್,ಒಂದೆರೆಡು ವರ್ಷಗಳ ಹಿಂದೆಯೇ ಹೇಳಿಕೊಂಡಿದ್ದರು. ಅದೀಗ ನಿಜವಾಗುತ್ತಿದೆ. ಚರಣ್ ರಾಜ್ ಹೊಸ ಚಿತ್ರವನ್ನು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದು, ಏಪ್ರಿಲ್ 27ರಂದು
ಪ್ರಾರಂಭವಾಗಲಿದೆ.
ಚರಣ್ ರಾಜ್ ಅವರಿಗೆ ನಿರ್ದೇಶನ ಮಾಡಬೇಕೆನ್ನುವುದು ಬಹುಕಾಲದ ಕನಸಂತೆ. ಅಷ್ಟೇ ಅಲ್ಲ, ಅದು ಕನ್ನಡದಿಂದಲೇ ಆಗಬೇಕು ಎಂದಿತ್ತಂತೆ. ಅದರಂತೆ, ಅವರು ತಮ್ಮ ಹುಟ್ಟುಹಬ್ಬದ ದಿನವಾದ ಏಪ್ರಿಲ್ 27ರಂದು ತಾವು ನಿರ್ದೇಶಿಸಲಿರುವ ಹೊಸ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಇದೊಂದು ಕಾಮಿಡಿ ಚಿತ್ರವಾಗಲಿದ್ದು, ಮರ್ಡರ್ ಮಿಸ್ಟ್ರಿ ಸಹ ಇರುತ್ತದಂತೆ.
ಈ ಹೆಸರಿಡದ ಚಿತ್ರವನ್ನು ಮಂಜುನಾಥ್, ರವಿಕುಮಾರ್, ಎಸ್ವಿಕೆ ಬ್ರದರ್ಸ್ ಮತ್ತು ದೇವೇಂದ್ರ ರಾಜ್ ಎನ್ನುವವರು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸುತ್ತಿದ್ದಾರೆ.
ಸಾಯಿಕೃಷ್ಣ ಸಂಭಾಷಣೆ ಈ ಚಿತ್ರಕ್ಕಿದ್ದು, ನಾಯಕ ಮತ್ತು ನಾಯಕಿಯ ಹುಡುಕಾಟ ನಡೆಯುತ್ತಿದೆ. ವಿಶೇಷವೆಂದರೆ, ಚರಣ್ ರಾಜ್ ಅವರ ಮಗ ತೇಜ್ ಸಹ ಈ ಚಿತ್ರದ ಭಾಗವಾಗಲಿದ್ದಾರೆ. ತೇಜ್, ಈ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಹಾಡು ಚಿತ್ರದ ಹೈಲೈಟ್
ಆಗಲಿದೆಯಂತೆ.