Advertisement

ಆಡುವ ಮಾತುಗಳಿಗೆ ಅಕ್ಷರ ರೂಪ

06:00 AM Mar 08, 2019 | Team Udayavani |

ಬೆಂಗಳೂರು: ನಾವು ಆಡುವ ಕನ್ನಡ ಮಾತುಗಳಿಗೆ ಲಿಖೀತ ರೂಪ ಕೊಡುವ “ಸ್ಪೀಚ್‌ ಟು ಟೆಕ್ಸ್ಟ್ ಇಂಜಿನ್‌’ ಎಂಬ ನೂತನ ತಂತ್ರಜ್ಞಾನವನ್ನು ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಭಿವೃದ್ಧಿಪಡಿಸುತ್ತಿದೆ.

Advertisement

ಈ ಸಂಬಂಧ  ಕರಾವಳಿ, ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಧ್ವನಿಗಳನ್ನು ಸಂಗ್ರಹಿಸಲಿದೆ. ಇಲ್ಲೆಲ್ಲಾ ಒಂದೇ ಪದವನ್ನು ವಿವಿಧ ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ. ಆ ಮಾದರಿಗಳನ್ನು ಕ್ರೋಡೀಕರಿಸಿ, ಸ್ಪೀಚ್‌ ಟು ಟೆಕ್ಸ್ಟ್ ಇಂಜಿನ್‌ನಲ್ಲಿ ಹಾಕಲು ಉದ್ದೇಶಿಸಲಾಗಿದೆ. ಅಲ್ಲದೆ, ಇದಕ್ಕಾಗಿ ಭಾಷಾ ತಜ್ಞರು, ಸಾಹಿತಿಗಳನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಈ ರೀತಿಯ ವೈಜ್ಞಾನಿಕ ಪ್ರಯೋಗ ನಡೆಯುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಯೋಜನೆಯನ್ನು ಐಐಎಸ್‌ಸಿಯ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗವು ಕೈಗೆತ್ತಿಕೊಂಡಿದ್ದು, ಮುಂದಿನ ಏಳೆಂಟು ತಿಂಗಳಲ್ಲಿ ಇದಕ್ಕೆ ಸ್ಪಷ್ಟ ರೂಪ ಸಿಗಲಿದೆ. ಯೋಜನೆಗೆ ಸುಮಾರು 50 ಲಕ್ಷ ರೂ. ವಿನಿಯೋಗಿಸಿದ್ದು, ಮೌಖೀಕ ಸಾಹಿತ್ಯ ಸೇರಿದಂತೆ ಕನ್ನಡ ಭಾಷೆಯ ಬೆಳವಣಿಗೆಗೆ ಇದು ಸಾಕಷ್ಟು ಕೊಡುಗೆ ನೀಡಲಿದೆ. ಜತೆಗೆ ಅಪ್ಪಟ ಗ್ರಾಮೀಣ ಭಾಷೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶವೂ ದೊರೆಯಲಿದೆ ಎಂದು ವಿಶ್ಲೇಷಿಸಲಾಗಿದೆ.

ಶೇ.95ರಷ್ಟು ನಿಖರತೆ: ಪ್ರಸ್ತುತ ಗೂಗಲ್‌ ಮತ್ತಿತರ ಖಾಸಗಿ ಸಂಸ್ಥೆಗಳು ಮೌಖೀಕವಾಗಿ ಹೇಳಿದ್ದನ್ನು ಲಿಖತ ರೂಪದಲ್ಲಿ ನೀಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಆದರೆ, ಅವುಗಳ ನಿಖರತೆ ಪ್ರಮಾಣ ತುಂಬಾ ಕಡಿಮೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಅದು ಸೀಮಿತವಾಗಿದೆ. ಆದರೆ, ಐಐಎಸ್‌ಸಿ ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನದಲ್ಲಿ ಶೇ.95ರಷ್ಟು ನಿಖರತೆ ಇರಲಿದೆ. ಮುಂದಿನ ದಿನಗಳಲ್ಲಿ ಇದು ಜನರಿಗೆ ಉಚಿತವಾಗಿ ದೊರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

“ಕರ್ನಾಟಕದಲ್ಲಿ ಒಂದೇ ಭಾಷೆಯನ್ನು ಭಿನ್ನವಾಗಿ ಮಾತನಾಡುವ ಜನರಿದ್ದಾರೆ. ಹಾಗಾಗಿ, ಆ ಎಲ್ಲ ಭಾಗಗಳಿಂದ ಸುಮಾರು ಎರಡು ಸಾವಿರ ಮಾದರಿಗಳನ್ನು ನಾವು ಸಂಗ್ರಹಿಸಲು ಉದ್ದೇಶಿಸಿದ್ದೇವೆ. ಅವುಗಳನ್ನು ನೂತನ ಸ್ಪೀಚ್‌ ಟು ಟೆಕ್ಸ್ಟ್ ಇಂಜಿನ್‌ನಲ್ಲಿ ಹಾಕಲಾಗುತ್ತದೆ. ಆಗ ಅವುಗಳನ್ನು ಗುರುತಿಸಿ, ತಂತ್ರಜ್ಞಾನವು ಪಠ್ಯ ರೂಪದಲ್ಲಿ ಅದನ್ನು ನೀಡುತ್ತದೆ. ಎಲ್ಲವನ್ನೂ ಟೈಪ್‌ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಸಮಯ ಉಳಿತಾಯ ಆಗುತ್ತದೆ ಎಂದು ಐಐಎಸ್ಸಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಎ.ಜಿ.ರಾಮಕೃಷ್ಣನ್‌ ಹೇಳಿದರು.

Advertisement

ಯಾವುದೇ ಭಾಷೆ ಬೆಳೆವಣಿಗೆ ಹೊಂದಬೇಕೆಂದರೆ ಆ ಭಾಷೆಗೆ ತಂತ್ರಜ್ಞಾನದ ಸ್ಪರ್ಶ ಸಿಗಬೇಕು ಹಾಗೂ ಅದನ್ನು ಸುಲಭವಾಗಿ ಬಳಸುವಂತಾಗಬೇಕು. ಈ ಹೊಸ ಪ್ರಯೋಗದಿಂದ ಅವೆರಡೂ ಸಾಕಾರಗೊಳ್ಳಲಿವೆ. ಅದರಲ್ಲೂ ಐಐಎಸ್‌ಸಿ ರೀತಿಯ ಪ್ರತಿಷ್ಠಿತ ಸಂಸ್ಥೆ ಈ ಪ್ರಯೋಗಕ್ಕೆ ಮುಂದಾಗಿರುವುದರಿಂದ ಹೆಚ್ಚು ನಿಖರತೆ ಇರುತ್ತದೆ. ಇದರಿಂದ ಈಗಲೂ ಮೌಖೀಕವಾಗಿರುವ ಸಾಹಿತ್ಯ, ಅಧಿವೇಶನಗಳು ನಡೆದಾಗ ಅಲ್ಲಿನ ಚರ್ಚೆಗಳನ್ನು ಯಥಾವತ್ತಾಗಿ ಲಿಖೀತ ರೂಪದಲ್ಲಿ ತರಬಹುದು. ಸಂಗೀತ ಮತ್ತಿತರ ಕ್ಷೇತ್ರಗಳಲ್ಲೂ ಇದನ್ನು ಬಳಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ತಿಳಿಸುತ್ತಾರೆ. 

ಇಲಾಖೆಯು ಒಟ್ಟಾರೆ ಐದು ಯೋಜನೆಗಳನ್ನು ಐಐಎಸ್‌ಸಿಗೆ ನೀಡಿದೆ. ಅದರಲ್ಲಿ ಸ್ಪೀಚ್‌ ಟು ಟೆಕ್ಸ್ಟ್ ಕೂಡ ಒಂದು. ಇದಕ್ಕೆ ಇಲಾಖೆ ಅಗತ್ಯ ಸಹಕಾರ ನೀಡಲಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ.
-ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next