Advertisement
ಪಟ್ಟಣದಲ್ಲಿ ಸುಮಾರು 25ರಿಂದ 30 ಲಾಡ್ಜ್ಗಳಿವೆ. ತಲಾ ಒಂದರಲ್ಲಿ ಸರಾಸರಿ 30 ಕೊಠಡಿಗಳಿದ್ದು, ಒಟ್ಟಾರೆ ಕೊಠಡಿಗಳ ಸಂಖ್ಯೆ 900 ಆಗಬಹುದು. ತಲಾ ಒಂದರಲ್ಲಿ ಇಬ್ಬರಿಗೆ ತಂಗಲು ಅವಕಾಶ ನೀಡಿದರೂ 1,800ರಿಂದ 2,000 ಜನರಿಗೆ ವಸತಿ ವ್ಯವಸ್ಥೆ ಆಗಬಹುದು. ಅದೇ ರೀತಿ, ಸಮ್ಮೇಳನ ನಡೆಯುವ ವಿಶ್ವವಿದ್ಯಾಲಯದ ಅತಿಥಿ ಗೃಹಗಳಿದ್ದು, ಅಲ್ಲಿ ಸುಮಾರು 20 ಕೊಠಡಿಗಳು, ವಿದ್ಯಾರ್ಥಿಗಳ ವಸತಿ ನಿಲಯಗಳಿವೆ. ಅವುಗಳನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡರೂ ಗಣ್ಯರಿಗೇ ಸಾಕಾಗುತ್ತವೆ. ಉಳಿದವರ ಕತೆ ಏನು ಎಂಬ ಆತಂಕ ಆಯೋಜಕರನ್ನು ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಸಮ್ಮೇಳನ ನಡೆಯುವ ಸ್ಥಳದಿಂದ ಅತಿಥಿಗಳು ತಂಗುವ ಜಾಗಗಳು ಆರೇಳು ಕಿ.ಮೀ. ದೂರದಲ್ಲಿವೆ. ಅಲ್ಲಿಂದ ಅವರನ್ನು ಮೂರೂ ದಿನವೂ ಕರೆತರಲು ಹಾಗೂ ವಾಪಸ್ ಕಳುಹಿಸಿಕೊಡಲು ವಾಹನಗಳ ವ್ಯವಸ್ಥೆ ಆಗಬೇಕೆಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕಲಬುರಗಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಹಮನಿ ಕೋಟೆ, ಬುದ್ಧ ವಿಹಾರ, ವಿಜಯಪುರದ ಗೋಳಗುಮ್ಮಟ, ಬರೀದ್‌ಶಾಹಿ ಕೋಟೆ, ಮಹಮ್ಮದ ಗವಾನ್ ಮದರಸ ಸೇರಿ ಹತ್ತಾರು ಪ್ರೇಕ್ಷಣೀಯ ತಾಣಗಳೂ ಇವೆ. ಇದಕ್ಕಾಗಿ ಸಾರಿಗೆ ನಿಗಮಗಳ ಬಸ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ ವಾಹನಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದೂ ವಿವರಿಸಿದರು.
ಲಾಡ್ಜ್ಗಳು ಹೌಸ್‌ಫುಲ್!: “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವಧಿ ಸೇರಿ ಆಸುಪಾಸಿನ 2-3 ದಿನಗಳು ಈಗಾಗಲೇ ಲಾಡ್ಜ್ಗಳು ಬುಕಿಂಗ್ ಆಗಿವೆ. ಯಾವುದೇ ಕೊಠಡಿಗಳು ಖಾಲಿ ಇಲ್ಲ. ಕೇವಲ ನಮ್ಮಲ್ಲಿ ಅಲ್ಲ; ಪಟ್ಟಣದ ಬಹುತೇಕ ಎಲ್ಲ ಲಾಡ್ಜ್ಗಳ ಸ್ಥಿತಿಯೂ ಇದೇ ಆಗಿದೆ’ ಎಂದು ಕಲಬುರಗಿಯ ಹೋಟೆಲ್ ಆಶ್ರಯ ಕಂಫರ್ಟ್ಸ್ ಸಿಬ್ಬಂದಿಯೊಬ್ಬರು ಸ್ಪಷ್ಟಪಡಿಸಿದರು.
“ನಮ್ಮಲ್ಲಿ ವಿವಿಧ ಪ್ರಕಾರದ ಕೊಠಡಿಗಳಿಗೆ ಬೇರೆ ಬೇರೆ ಶುಲ್ಕ ಇದೆ. ಕನಿಷ್ಠ 800ರಿಂದ ಗರಿಷ್ಠ 2,300 ರೂ.ವರೆಗಿನ ಕೊಠಡಿಗಳಿವೆ. ಆದರೆ, ಸಮ್ಮೇಳನ ನಡೆಯುವ ಮೂರು ದಿನಗಳು ಅಂದರೆ ಫೆ. 5-7ರ ಅವಧಿಯಲ್ಲಿ ಯಾವುದೇ ಕೊಠಡಿಗಳು ಖಾಲಿ ಇಲ್ಲ. ಬೇಡಿಕೆ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿಲ್ಲ. ವರ್ಷಪೂರ್ತಿ ನಮ್ಮಲ್ಲಿ ಒಂದೇ ದರ ಇರುತ್ತದೆ’ ಎಂದು ಆದಿತ್ಯ ಲಾಡ್ಜ್ನ ವ್ಯವಸ್ಥಾಪಕರು ತಿಳಿಸುತ್ತಾರೆ.
ಮನೆ ಆತಿಥ್ಯ?: ಈ ಹಿಂದೆ ಗಂಗಾವತಿ ಸೇರಿ ಹಲವು ಸಮ್ಮೇಳನಗಳಲ್ಲೂ ಈ ರೀತಿ ವಸತಿ ಸಮಸ್ಯೆ ಆಗಿತ್ತು. ಆಗ ಅಲ್ಲೆಲ್ಲಾ ಬಂದ ಅತಿಥಿಗಳಿಗೆ ಸ್ಥಳೀಯರ ಮನೆಗಳಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನಕ್ಕೆ ಬರುವವರು ಕನ್ನಡದ ಬಂಧುಗಳು ಎಂದು ಮನೆ ಆತಿಥ್ಯ ನೀಡುವ ಮೂಲಕ ಅಭಿಮಾನ ಮೆರೆಯಬೇಕು. ಇದು ಸಾಧ್ಯವಾದರೆ, ಕಲಬುರಗಿಗೆ ಹೆಸರೂ ಬರುತ್ತದೆ. ಸಮ್ಮೇಳನ ಯಶಸ್ವಿಯೂ ಆಗುತ್ತದೆ ಎಂದು ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿಯೊಬ್ಬರು ಸಲಹೆ ನೀಡಿದರು.
ಕಲಬುರಗಿ ಜಿಲ್ಲಾ ಕೇಂದ್ರ. ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು ಅಲ್ಲಿವೆ. ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ಸಭೆಗಳಾಗಿವೆ. ನಾನೂ ನಾಲ್ಕು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ಯಾರೂ ವಸತಿ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹಾಗಾಗಿ, ನನ್ನ ಪ್ರಕಾರ ಸಮಸ್ಯೆ ಆಗಲಿಕ್ಕಿಲ್ಲ. -ಮನು ಬಳಿಗಾರ್ ಕಸಾಪ ಅಧ್ಯಕ್ಷ * ವಿಜಯಕುಮಾರ್ ಚಂದರಗಿ