ಚನ್ನರಾಯಪಟ್ಟಣ: ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ್ ಕುರ್ಚಿಗಾಗಿ ಇಬ್ಬರು ಕೆಎಎಸ್ ಅಧಿಕಾರಿಗಳ ನಡುವೆ ನಡೆಯು ತ್ತಿರುವ ಕಾಳಗ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ4 ದಿನಗಳಿಂದ ಮಿನಿ ವಿಧಾನಸೌಧದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳನ್ನು ಸಾರ್ವಜನಿಕರು ಕಂಡು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರತಿ ದಿನವೂ ಕಡತಕ್ಕೆ ಸಹಿ ಬದಲಾಗುತ್ತಿದೆ.
ಆಗುತ್ತಿರುವುದೇನು?: ಕಳೆದ ಎರಡು ತಿಂಗಳ ಹಿಂದೆ ತಾಲೂಕಿಗೆ ಹೊಸದಾಗಿ ಆಗಮಿಸಿದ್ದ ಸಿ.ಜೆ. ಗೀತಾ ಸೆ.12 ರ ಸಂಜೆ 6 ಗಂಟೆ ವರೆಗೆ ಕರ್ತವ್ಯ ನಿರ್ವಹಿಸಿದ್ದರು. ಅದೇ ದಿನ ರಾತ್ರಿ 8 ಗಂಟೆಗೆ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಈ ಹಿಂದೆ ಇದ್ದ ತಹಶೀಲ್ದಾರ್ ಗೋವಿಂದರಾಜು ಕಂದಾ ಯ ಇಲಾಖೆ ಅಧಿಕಾರಿಗಳ ಸಭೆ ಮಾಡುವ ಮೂಲಕ ನಾನೇ ತಹಶೀಲ್ದಾರ್ ಕುರ್ಚಿಯಲ್ಲಿ ಮುಂದುವರೆಯುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪರಸ್ಪರ ನಾಮಫಲಕ ತೆರವು: ತಹಶೀಲ್ದಾರ್ ಕೊಠಡಿಗೆ ಗೀತಾ ಅವರ ಹೆಸರಿನಲ್ಲಿ ಹಾಕಿದ್ದ ನಾಮಫಲಕವನ್ನು ಸೆ.13ರ ಬೆಳಗ್ಗೆ ತೆರವು ಮಾಡಿ ಮಧ್ಯಾಹ್ನದ ವರೆಗೆ ಗೋವಿದಂರಾಜು ಕಡತಗಳಿಗೆ ಸಹಿ ಹಾಕಿ ವಿಲೇವಾರಿ ಮಾಡಿ ನಂತರ ಬೆಂಗಳೂರಿಗೆ ತೆರಳಿದರು. ಮಧ್ಯಾಹ್ನ ಮೇಲೆ ಕಚೇರಿಗೆ ಆಗಮಿಸಿ ಕುರ್ಚಿಯಲ್ಲಿ ಕುಳಿತ ಗೀತಾ ಅವರು ಗೋವಿಂದರಾಜು ನಾಮಫಲಕ ತೆರವು ಮಾಡಿ ಸಂಜೆ ಆರು ಗಂಟೆ ವರೆಗೆ ಸೇವೆ ಸಲ್ಲಿಸಿ ಕಚೇರಿಯಿಂದ ತೆರಳಿದರು.
ನಾನೇ ತಹಶೀಲ್ದಾರ್: ಅದೇ ದಿನ ಬೆಂಗಳೂರಿನಿಂದ ರಾತ್ರಿ 7.30ಕ್ಕೆ ವಿಧಾನಸೌದಕ್ಕೆ ಆಗಮಿಸಿ ಗಿತಾ ಅವರ ನಾಮಫಲಕ ತೆರವು ಮಾಡಿ ಕರ್ತವ್ಯಕ್ಕೆ ಹಾಜರಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ಆದೇಶದ ಪ್ರಕಾರ ನಾನೇ ತಹಶೀಲ್ದಾರ್ ಕುರ್ಚಿಯಲ್ಲಿ ಮುಂದುವರೆಯುತ್ತೇನೆ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಘಟನೆಗಳ ಮುಖಂಡರಿಗೆ ಗೋವಿಂದರಾಜು ತಿಳಿಸಿದ್ದರು.
ಕಡತ ವಿಲೇವಾರಿ, ಸನ್ಮಾನ ಸ್ವೀಕಾರ: ಸೆ.14 ರಂದು ಬೆಳಗ್ಗೆ ಸರ್ಕಾರಿ ವಾಹನದಲ್ಲಿ ಕಚೇರಿಗೆ ಆಗಮಿಸಿ ಮಧ್ಯಾಹ್ನದ ವರೆಗೆ ಗೋವಿಂದರಾಜು ಕರ್ತವ್ಯ ನಿರ್ವಹಿಸಿ ಕಡತ ವಿಲೇವಾರಿ ಮಾಡಿದರು. ಮಧ್ಯಾಹ್ನ ದೂರವಾಣಿ ಕರೆ ಬಂದ ತಕ್ಷಣ ಕಚೇರಿಯಿಂದ ಹೊರ ನಡೆದರು. ಈ ವೇಳೆ ಸರ್ಕಾರಿ ವಾಹನದಲ್ಲಿ ತೆರಳದೆ ಖಾಸಗಿ ವಾಹನದಲ್ಲಿ ತೆರಳಿದರು. ಕಡತ ವಿಲೇವಾರಿ ಮಾಡಿದ ಗೀತಾ: ಸೆ.15 ರಂದು ಬೆಳಗ್ಗೆ ಸರ್ಕಾರಿ ವಾಹನದಲ್ಲಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಗೀತಾ ಕರ್ತವ್ಯಕ್ಕೆ ಹಾಜರಾಗಿ, ಗ್ರೇಡ್ 2 ತಹಶೀಲ್ದಾರ್, ಉಪ ತಹಶೀಲ್ದಾರ್, ಶಿರಸ್ತೇದಾರ, ಕಂದಾಯ ನಿರೀಕ್ಷಕರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡು ಸಂವಿಧಾನ ಪೀಠಿಕೆ ವಾಚನ ಮಾಡಿದರು. ಸಂಜೆವರೆಗೆ ಕಡತಗಳಿಗೆ ಸಹಿ ಮಾಡಿ ವಿಲೇವಾರಿ ಮಾಡಿದ್ದಲ್ಲದೇ ಸಂಜೆ 4 ಗಂಟೆಗೆ ಆರು ಹೋಬಳಿಯ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಸಭೆ ಮಾಡಿದ್ದಾರೆ.
ನಿತ್ಯವೂ ಒಬ್ಬೊಬ್ಬರು ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿದರೆ ರೈತರು, ಸಾರ್ವಜನಿಕರಿಗೆ ಆಗುವ ತೊಂದರೆಗೆ ಯಾರು ಜವಾಬ್ದಾರರು? ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಅಧಿಕೃತವಾಗಿ ಒಬ್ಬರಿಗೆ ತಹಶೀಲ್ದಾರ್ ಜವಾಬ್ದಾರಿ ನೀಡಲಿ. –
ಸಿ.ಜೆ.ರವಿ, ರೈತ ಸಂಘ ತಾಲೂಕು ಅಧ್ಯಕ
– ಶಾಮಸುಂದರ್ ಕೆ.ಅಣ್ಣೇನಹಳ್ಳಿ