Advertisement

Channarayapatna: ಊರು ಸುತ್ತಿ ಸುಣ್ಣ ಮಾರುವವರ ಕಂಡಿರಾ?

05:08 PM Oct 08, 2023 | Team Udayavani |

ಚನ್ನರಾಯಪಟ್ಟಣ: ಸುಣ್ಣ ಬೇಕೆ ಸುಣ್ಣ.. ಸುಣ್ಣ ಬೇಕೆ, ಸುಣ್ಣ… ಈ ಹಿಂದೆ ಪಟ್ಟಣ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸೈಕಲ್‌, ಚೀಲಗಳಲ್ಲಿ ಸುಣ್ಣ ಹೊತ್ತು ಈ ರೀತಿ ಕೂಗುವುದು ಸಾಮಾನ್ಯವಾಗಿತ್ತು. ಪ್ರತಿ ಮನೆಯಲ್ಲೂ ಗೋಡೆಗಳಿಗೆ ಬಳಿಯಲು ಸಣ್ಣ ಅನಿವಾರ್ಯವಾಗಿತ್ತು. ಕೃಷಿ ಚಟುವಟಿಕೆಗಳಿಗೂ ಸುಣ್ಣ ಬೇಕಿತ್ತು.

Advertisement

ವೀಳ್ಯಾದಲೆ ಅಡಕೆಗೆ ಸುಣ್ಣ ಅವಿಭಾಜ್ಯ ಅಂಗವಾಗಿತ್ತು. ಪ್ರತಿ ಮನೆಯಲ್ಲೂ ಎಲೆ ಅಡಕೆಗಾಗಿ ಸೋಸಿದ, ನುಣ್ಣನೆಯ ಸಣ್ಣ ವನ್ನು ಸಣ್ಣ ಡಬ್ಬಿಯಲ್ಲಿ ತುಂಬಿ ಇಟ್ಟುಕೊಳ್ಳಲಾಗುತ್ತಿತ್ತು. ಜತೆಗೆ ಇತರೆ ಬಳಕೆಗಾಗಿ ಚೀಲ, ಮಡಿಕೆ ಮತ್ತಿತರ ವಸ್ತುಗಳಲ್ಲಿ ತುಂಬಿ ಮನೆಯಲ್ಲಿ ಸಂಗ್ರಹಿಸಿಕೊಳ್ಳಲಾಗುತ್ತಿತ್ತು. ಪ್ರತಿ ಮನೆಯಲ್ಲೂ ಸ್ಥಳೀಯವಾಗಿ ತಯಾರಿ ಸುತ್ತಿದ್ದ ಸಣ್ಣ ತೀರಾ ಅನಿವಾರ್ಯವಾಗಿತ್ತು. ಆದರೆ,

ಇದೀಗ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸ್ಥಳೀಯವಾಗಿ ಸುಣ್ಣ ತಯಾರಿಸುವವರೂ ಇಲ್ಲ, ಮಾರಾಟ ಮಾಡು ವವರೂ ಇಲ್ಲ, ಸ್ಥಳೀಯವಾಗಿ ಉತ್ಪಾದಿ ಸುವ ಸುಣ್ಣ ಯಾರಿಗೂ ಬೇಕಿಲ್ಲ. ಬೇಡಿಕೆಯೂ ಇಲ್ಲ, ಇದೀಗ ಮನೆ ಕಟ್ಟಡಗಳನ್ನು ಸಿಮೆಂಟ್‌ ಪ್ಲಾಸ್ಟಿಂಗ್‌ ಮಾಡಿಸುತ್ತಿರುವುದರಿಂದ ಗೋಡೆಗಳಿಗೆ ಪೇಯಿಂಟ್‌ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ದೇಸಿಯ ಸುಣ್ಣಕ್ಕೆ ಬೇಡಿಕೆ ಇಲ್ಲ. ಇತ್ತೀಚೆಗೆ ಕೃಷಿ ಚಟುವಟಿಕೆಗಳಿಗೆ ಅಂದರೆ, ರೇಷ್ಮೆ ಹುಳು ಸಾಕಾಣಿಕೆ, ಅಡಕೆ ಮರಗಳಿಗೆ ಬಳಿಯಲು, ಶುಂಠಿ ಬೆಳೆ ರೋಗ ನಿವಾರಣೆ, ಕೋಳಿ ಸಾಕಾಣಿಕೆ ಮತ್ತಿತರ ಬೆಳೆಗಳಿಗಾಗಿ ಮಾತ್ರ ಸುಣ್ಣ ಬಳಸುತ್ತಾರೆ. ಗೃಹೋಪಯೋಗಿಯಾಗಿ ಸಣ್ಣು ಬಳಕೆ ತೀರಾ ಕಡಿಮೆ ಎನ್ನಬಹುದು.

ಈ ಕೃಷಿ ಚಟುವಟಿಕೆಗಳಿಗಾಗಿ ಎಲ್ಲರೂ ಫ್ಯಾಕ್ಟರಿ ಸುಣ್ಣವನ್ನೇ ಖರೀದಿಸುತ್ತಾರೆ. ಹೀಗಾಗಿ ಸ್ಥಳೀಯವಾಗಿ ಸಣ್ಣ ತಯಾರಿಸುವವರೂ ಇಲ್ಲ, ಹಲವು ಕುಟುಂಬಗಳು ತಲತಲಾಂತರಗಳಿಂದ ರೂಢಿಸಿಕೊಂಡು ಬಂದಿದ್ದ ಸುಣ್ಣ ತಯಾರಿಕೆ ವೃತ್ತಿಯನ್ನು ನಿಲ್ಲಿಸಿ, ಬೇರೆ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.ದೇಸಿ ಕಸುಬುಗಳು ನಿಧಾನ ವಾಗಿ ಮೂಲೆಗುಂಪಾಗುತ್ತಿದ್ದು, ಸುಣ್ಣ ತಯಾರು ಮಾಡುವ ಸುಣ್ಣಗಾರರು ಕೂಡ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಕೆಲವು ದಶಕಗಳ ಹಿಂದೆ ಸುಣ್ಣದ ಕಲ್ಲುಗಳನ್ನು ಸುಟ್ಟು, ಸುಣ್ಣ ತಯಾರು ಮಾಡುವವರು ಕಂಡುಬರುತ್ತಿದ್ದರು. ಆದರೆ, ಈಗ ಅವರು ಅಷ್ಟಾಗಿ ಕಾಣುತ್ತಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಇದ್ದಾರೆ.

ಸಂತೆಯಲ್ಲೂ ಸುಣ್ಣು ಸಿಗದು: ಮೊದಲೆಲ್ಲ ನಗರಗಳಲ್ಲಿ ಅಲ್ಲಲ್ಲಿ ದೇಸಿ ಸುಣ್ಣ ಮಾರಾಟ ಮಾಡುವವರು ಕಾಣಿಸುತ್ತಿದ್ದರು. ಇನ್ನು ತಾಲೂಕು, ಹೋಬಳಿ, ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಸುಣ್ಣ ಮಾರಾಟ ಮಾಡುವವರು ಇರುತ್ತಿದ್ದರು. ಈಗ ಸುಣ್ಣಕ್ಕೆ ಬೇಡಿಕೆಯಿಲ್ಲದ ಕಾರಣ ದಿಂದ ಮಾರಾಟಗಾರರು ಕಾಣಿಸು ತ್ತಿಲ್ಲ. ಇಲ್ಲಿನ ಚನ್ನರಾಯಪಟ್ಟಣದ ಶನಿವಾ ರದ ಸಂತೆಯಲ್ಲಿ ಒಬ್ಬರು ಮಾತ್ರ ಸುಣ್ಣ ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ಶ್ರವಣ ಬೆಳಗೊಳ, ಹಿರೀಸಾವೆ, ಕಾರೇಹಳ್ಳಿ, ಅಣ್ಣೇನಹಳ್ಳಿ, ಕೋಣನಕುಂಟೆ, ಅಕ್ಕನಹಳ್ಳಿ ಸಂತೆಯಲ್ಲಿ ಸುಣ್ಣ ಮಾರುವವರಿಲ್ಲದಂತಾಗಿದೆ.

Advertisement

ಲಾಭವಿಲ್ಲದ ವೃತ್ತಿ: ದೇಸಿ ಸುಣ್ಣಗಳನ್ನು ಖರೀದಿಸುವವರೇ ಇಲ್ಲ ಎಂದ ಮೇಲೆ ಅದನ್ನು ತಯಾರು ಮಾಡುವವರು ತಾನೆ ಏನು ಮಾಡಬೇಕು? ದೂರದ ಊರುಗಳಿಂದ ಮಣ್ಣಿನಡಿ ಸಿಗುವ ಕಲ್ಲುಗಳನ್ನು ತಂದು ಭಟ್ಟಿಕಟ್ಟಿ ಸುಟ್ಟು ಶ್ರಮಪಟ್ಟರೂ ಅದರಿಂದ ಲಾಭವಿಲ್ಲ ಎನ್ನುವುದಾದರೆ ಆ ಕೆಲÓ ‌ವನ್ನು ಏಕೆ ಮಾಡಬೇಕು?, ಹೀಗಾಗಿ ಬಹಳಷ್ಟು ಈ ಕಸುಬು ಬಿಟ್ಟು ಬೇರೆ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದೇವೆ ಎಂದು ಸುಣ್ಣ ತಯಾರಿಸುವವರು ಅಳಲು ತೋಡಿಕೊಳ್ಳುತ್ತಾರೆ. ತಾಲೂಕಿನಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ಸುಣ್ಣ ತಯಾರಿ ಕಸುಬಿನಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆನ ದಿನ ಗಳಲ್ಲಿ ಎಲ್ಲರೂ ವೃತ್ತಿ ಬಿಟ್ಟುಬಿಟ್ಟಿದ್ದಾರೆ. ವೃತ್ತಾಕಾರದ ಭಟ್ಟಿ ಕಟ್ಟಿ ಸುಣ್ಣ ಬೇಯಿಸುವ ಒಲೆಗಳು ಕೂಡ ಕಾಣುತ್ತಿಲ್ಲ.

ಎಲೆ ಅಡಕೆಗೆ ಮಾತ್ರ ಸುಣ್ಣ ಖರೀದಿ: ಎಲೆ ಅಡಕೆ ತಿನ್ನುವವರು ಮಾತ್ರ ಸುಣ್ಣ ಖರೀದಿಸುತ್ತಾರೆ. ಹೀಗಾಗಿ ಚಿಕ್ಕ ಪೊಟ್ಟಣ ಮಾಡಿ ಮಾರಾಟ ಮಾಡಬೇಕು. ಸಂತೆಗಳಿಗೆ ಹೋಗಿ ಮಾರಾಟ ಮಾಡಿದರೂ ಸುವಾಸನೆ ಮತ್ತು ಬಣ್ಣದ ಆಧುನಿಕ ಸುಣ್ಣಕ್ಕೆ ಪೈಪೋಟಿ ನೀಡುವುದು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಣ್ಣಿನ ಗೋಡೆ ಇರುವ ಮನೆಯವರು ಮಾತ್ರ ಖರೀದಿಸುತ್ತಾರೆ. ಮಹಾಲಯ ಹಬ್ಬದ ಸಮಯದಲ್ಲಿ ಮಾತ್ರ ಬೇಡಿಕೆ ಉಳಿದಂತೆ ಕೇಳುವವರಿಲ್ಲ ಎಂದು ಸುಣ್ಣದ ವ್ಯಾಪಾರಿ ಚೇತನ್‌ ತಿಳಿಸುತ್ತಾರೆ.

ಸ್ಥಳೀಯ ಕಚ್ಚಾ ವಸ್ತು ಸಿಗುತ್ತಿಲ್ಲ; ವೃತ್ತಿ ದುಬಾರಿ, ಆದಾಯ ಮಾತ್ರ ಕಡಿಮೆ: ಸುಣ್ಣ ತಯಾರಿಸಲು ಬೇಕಾಗುವ ಕಲ್ಲುಗಳು ಸಿಗುವುದಿಲ್ಲ, ಅವುಗಳನ್ನು ದೂರದಿಂದ ಹಣ ನೀಡಿ ತರಬೇಕಾಗುತ್ತದೆ. ಅದನ್ನು ಬೇಯಿಸಲು ಸೌದೆ, ಇದ್ದಿಲು ಕೂಡ ದುಬಾರಿಯಾಗಿದೆ. ಎಲ್ಲವನ್ನು ಹಣ ನೀಡಿ ತರಬೇಕಾಗುತ್ತಿದ್ದು, ಬಂಡವಾಳ ಸುರಿದು ಸುಣ್ಣ ತಯಾರಿಸುವುದು ದೊಡ್ಡ ಸವಾಲಾಗಿದೆ. ಒಂದು ಟ್ರ್ಯಾಕ್ಟರ್‌ ಸುಣ್ಣದ ಕಲ್ಲುಗಳನ್ನು ಬೇಯಿಸಿದರೆ 100-110 ಮೂಟೆ ಸುಣ್ಣ ಬರುತ್ತದೆ, ಇದರಲ್ಲಿ ಕಚ್ಚಾ ಸುಣ್ಣ ತೆಗೆದು ಶುದ್ಧವಾದ ಹರಳು ಸುಣ್ಣ 70-80 ಮೂಟೆ ಸಿಗುತ್ತದೆ. ಈ ಹಿಂದೆ ಕೃಷಿಗೆ ಸುಣ್ಣವನ್ನು ರೈತರು ಖರೀದಿಸುತ್ತಿದ್ದರು. ಆದರೆ ಇದೀಗ ಫ್ಯಾಕ್ಟರಿಯಿಂದ ಬರುವ ಸುಣ್ಣಗಳು ಕಡಿಮೆ ದರದಲ್ಲಿ ದೊರೆಯುವುದರಿಂದ ಗೊಬ್ಬರ ಖರೀದಿಸುವಾಗಲೇ ಸುಣ್ಣವನ್ನು ಅಂಗಡಿಗಳಿಂದ ರೈತರು ಖರೀದಿಸುತ್ತಾರೆ. ಹೀಗಾಗಿ ದೇಸೀಯ ಸುಣ್ಣಕ್ಕೆ ಬೇಡಿಕೆ ಕಡಿಮೆಯಾಗಿದೆ. ಕಷ್ಟಪಟ್ಟು ಸುಣ್ಣ ತಯಾರಿಸಿದರೆ ಬಂಡವಾಳ ಕೂಡ ಬರುವುದಿಲ್ಲ ಎಂದು ತಯಾರಕ ರಾಜಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next