Advertisement

ಚನ್ನಪಟ್ಟಣದಲ್ಲಿ ಮೂಲ ಸೌಲಭ್ಯದ ಸಮಸ್ಯೆ

05:19 PM Oct 31, 2019 | Naveen |

●ಎಂ.ಶಿವಮಾದು
ಚನ್ನಪಟ್ಟಣ:
ಕಸದ ರಾಶಿ, ಕಟ್ಟಿಕೊಂಡ ಚರಂಡಿ, ಗುಂಡಿಬಿದ್ದ ರಸ್ತೆ, ಬೀದಿದೀಪ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಪ್ರತಿದಿನ ಎದುರಿಸುತ್ತಾ ದಿನದೂಡುತ್ತಿದ್ದಾರೆ. ಹೌದು, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಸ ಕೊಳೆತು ಗಬ್ಬೆದ್ದು, ನಾರುತ್ತಿರುವ ಜತೆಗೆ ಅಲ್ಲಲ್ಲಿ ಚರಂಡಿ ಕಟ್ಟಿಕೊಂಡು ನೀರು ರಸ್ತೆಯಲ್ಲಿ ಹರಿಯುವ ಮೂಲಕ ಪಾದಚಾರಿಗಳು ಹಾಗೂ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

Advertisement

ಮುಸ್ಲೀಂ ವಾರ್ಡ್‌ ಸಮಸ್ಯೆ ಅಧಿಕವಾಗಿದ್ದರೆ, ಉಳಿದ ವಾರ್ಡ್‌ಗಳಲ್ಲಿ ಗುಂಡಿಬಿದ್ದ ರಸ್ತೆ, ಬೀದಿ ದೀಪ ಸಮಸ್ಯೆ ಹೆಚ್ಚಾಗಿದೆ. ಇನ್ನು ಕನ್ಸರ್ವೆನ್ಸಿ ಗಲ್ಲಿಗಳಲ್ಲಿ ಹಂದಿ, ನಾಯಿಗಳ ಉಪಟಳದಿಂದಾಗಿ ಕಸ ಕೊಳೆತು ರಸ್ತೆಯ ಅಸ್ತಿತ್ವವನ್ನೇ ಮುಚ್ಚಿದ್ದು, ಚಾನಲ್‌ ರಸ್ತೆಯಲ್ಲಿ ನೀರು ಮುಂದೆ ಹರಿಯಲಾಗದೆ ಅಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ.

ಕಸ ವಿಲೇವಾರಿ ಮಾಡಿಲ್ಲ: ಕಾಲಕಾಲಕ್ಕೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದು ಕಸದ ರಾಶಿ ಹೆಚ್ಚಾಗಲು ಕಾರಣವಾಗಿದೆ. ಮುಸ್ಲೀಂ
ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸ ಅಸಾಧ್ಯ ವಾಸನೆ ಹೊರಸೂಸುತ್ತಾ ಸಾಂಕ್ರಾಮಿಕ ರೋಗಗಳನ್ನು ಕೈಬೀಸಿ ಕರೆಯುತ್ತಿದೆ. ಕಸ ವಿಲೇವಾರಿಗಾಗಿ ಆಟೋಗಳು, ಸಕ್ಕಿಂಗ್‌ ಯಂತ್ರ ಖರೀದಿಸಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸದ ಪರಿಣಾಮ ಸಮಸ್ಯೆ ಎದುರಾಗಿದೆ.

ಹಾಗೆಯೇ ಸಾರ್ವಜನಿಕರಲ್ಲಿ ಕಂಟೇನರ್‌ಗಳಿಗೇ ಕಸ ಹಾಕುವಂತೆ ಅರಿವು ಮೂಡಿಸುವ ಕಾರ್ಯವಾಗದಿರುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಉತ್ಪತ್ತಿಯಾಗಿ ಸಮಸ್ಯೆ ಉಲ್ಬಣವಾಗುತ್ತಿದೆ.

ಗಲ್ಲಿ ಕಡೆ ಗಮನ ಕೊಡಿ: ಪಟ್ಟಣ ವ್ಯಾಪ್ತಿಯಲ್ಲಿನ ಅಡ್ಡರಸ್ತೆಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಸದ ತವರು ಮನೆಗಳಾಗಿ ಪರಿವರ್ತನೆಯಾಗಿದೆ. ಸಾರ್ವಜನಿಕರು ಈ ಅವ್ಯವಸ್ಥೆಗೆ ಆ ರಸ್ತೆಗಳಲ್ಲಿ ಸಂಚಾರ ಮಾಡುವುದನ್ನೇ ಬಿಟ್ಟಿದ್ದಾರೆ. ಈ ರಸ್ತೆಗಳಲ್ಲಿ ನಾಯಿಗಳು, ಹಂದಿಗಳು ತಮ್ಮ ಪರಾಕ್ರಮ ಮೆರೆಯುತ್ತಾ, ದಾರಿಯಲ್ಲಿ ಹೋಗುವ ಸಾಹಸ ಮಾಡುವವರಿಗೆ ಇನ್ನೊಮ್ಮೆ ಬಾರದಂತೆ ಎಚ್ಚರಿಕೆಯ ಸಂದೇಶ ನೀಡುತ್ತಾ ಗಲ್ಲಿ ಸಾಮ್ರಾಜ್ಯವನ್ನು ಆಳ್ವಿಕೆ ಮಾಡುತ್ತಿವೆ.

Advertisement

ಚರಂಡಿ ಸರಿಪಡಿಸಿ: ಬಹುತೇಕ ಪಟ್ಟಣದ ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಚರಂಡಿಗಳ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದ್ದು, ಇವುಗಳ ಸಾಚಾತನ ಪ್ರತಿ ಮಳೆಗಾಲದಲ್ಲೂ ಗೋಚರವಾಗುತ್ತಿದ್ದರೂ ಶಾಶ್ವತವಾಗಿ ಅವುಗಳಿಗೆ ಮುಕ್ತಿ ಕಲ್ಪಿಸಲು ಆಡಳಿತ ಮುಂದಾಗಿಲ್ಲ. ಚರಂಡಿ ಬಿಟ್ಟು ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ನೋಡಿಯೂ ನೋಡದಂತೆ ಅಧಿಕಾರಿಗಳು ಸುಮ್ಮನಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನು ಪಟ್ಟಣದ ಸುತ್ತಲೂ ಇರುವ ಚಾನಲ್‌ ರಸ್ತೆ ಬದಿಯಲ್ಲಿರುವ ನಾಗರಿಕರು ನಿಂತ ನೀರಿನಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳ ಕಾಟದಿಂದ ನಲುಗಿಹೋಗುತ್ತಿದ್ದು, ಈ ಸಂಕಷ್ಟದಿಂದ ಅವರನ್ನು ಪಾರು ಮಾಡಲು ಮುಂದಾದರೂ ಅಧಿಕಾರಿಗಳು ಮನಸ್ಸು ಮಾಡಬೇಕಿದೆ.

ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿರುವುದು ನಗರಸಭೆ ಆಡಳಿತದ ಕರ್ತವ್ಯವಾಗಿದೆ. ಅಧಿಕಾರಿಗಳು ಪಟ್ಟಣದ ಜನತೆಯ  ಕಷ್ಟವನ್ನೊಮ್ಮೆ ಅವಲೋಕಿಸಿ, ಅವುಗಳಿಗೆ ಪರಿಹಾರ ಕಲ್ಪಿಸಲು ಮುಂದಾಗುವರೇ ಎಂಬುದನ್ನು ಕಾದುನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next