Advertisement
ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಎಚ್‌ಡಿಕೆ, ಈ ಕ್ಷೇತ್ರವನ್ನು ಕಬ್ಜಾ ಮಾಡಿಕೊಂಡು ಜಿಲ್ಲೆಯಿಂದ ಎಚ್. ಡಿ.ದೇವೇಗೌಡರ ಕುಟುಂಬವನ್ನು ಹೊರಗಿಡಬೇಕು ಎಂದು ಡಿ.ಕೆ.ಶಿವಕುಮಾರ್ ಪಣತೊಟ್ಟಿದ್ದು, ಚನ್ನಪಟ್ಟಣದಲ್ಲಿ ಮತ್ತೂಮ್ಮೆ ಒಕ್ಕಲಿಗ ನಾಯಕರಿಬ್ಬರು ಕಾದಾಟಕ್ಕಿಳಿದಿದ್ದಾರೆ. ಬುಧವಾರ ಚನ್ನಪಟ್ಟಣಕ್ಕೆ ಎಂಟ್ರಿ ನೀಡಿದ ಡಿಕೆಶಿ ಟೆಂಪಲ್ ರನ್ ಮಾಡಿ, ಚನ್ನಪಟ್ಟಣವನ್ನು ಬದಲಾಯಿಸುತ್ತೇನೆ ಎಂದು ಹೇಳಿ ಹೋಗಿರುವ ಬೆನ್ನಲ್ಲೇ ಈ ಹಿಂದೆ ಕನಕಪುರ ಲೋಕಸಭಾ ಉಪಚುನಾವಣೆ, ನೀರಾ ಚಳವಳಿಯ ಸಮಯದ ರಾಜಕೀಯ ಜಿದ್ದಾಜಿದ್ದಿ ಮತ್ತೆ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
Related Articles
Advertisement
ಡಿಕೆಶಿ ಚಕ್ರವ್ಯೂಹ ಭೇದಿಸಲು ಸೈನಿಕನೇ ಕಮ್ಯಾಂಡರ್: ಚನ್ನಪಟ್ಟಣ ಕೋಟೆಗೆ ಲಗ್ಗೆ ಇಡುವ ಮೂಲಕ ಡಿ.ಕೆ.ಶಿವ ಕುಮಾರ್ ಒಕ್ಕಲಿಗರ ಕೋಟೆ ಯಲ್ಲಿ ಎಚ್.ಡಿ.ಕುಮಾರಸ್ವಾಮಿ ಯನ್ನು ಮಣಿಸಲು ಚಕ್ರವ್ಯೂಹ ಹಣೆದಿದ್ದಾರೆ. ಚನ್ನಪಟ್ಟಣವನ್ನು ಕಳೆದುಕೊಂಡರೆ ಬಿಜೆಪಿ ರಾಷ್ಟ್ರನಾಯಕರಲ್ಲಿ ಕುಮಾರಸ್ವಾಮಿ ಬಗ್ಗೆ ಮೂಡಿರುವ ಒಕ್ಕಲಿಗರ ಅಧಿನಾಯಕ ಎಂಬ ಇಮೇಜ್‌ಗೆ ಧಕ್ಕೆ ಬರುತ್ತದೆ. ಮಾಜಿ ಪ್ರಧಾನಿಯ ಮಗ, ಅವರ ಉತ್ತರಾಧಿಕಾರಿ ಎಂದು ದೆಹಲಿಯಲ್ಲಿ ಬಿಂಬಿಸಿಕೊಂಡಿರುವ ಕುಮಾರಸ್ವಾಮಿ, ಈ ಇಮೇಜ್ ಕಳೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ, ಚನ್ನಪಟ್ಟಣದಲ್ಲಿ ತನ್ನೆಲ್ಲ ಶಕ್ತಿಯನ್ನು ಕ್ರೋಢಿಕರಿಸುವ ಜತೆಗೆ ಗೆಲ್ಲಿಸಬಲ್ಲ ಜಾಕಿಯನ್ನು ಕಣಕ್ಕಿಳಿಸಿ ಡಿಕೆಶಿ ರಚಿಸಿದ ಚಕ್ರವ್ಯೂಹವನ್ನು ಯಶಸ್ವಿಯಾಗಿ ಭೇದಿಸಬಲ್ಲ ಸೇನಾನಿ ಎಚ್‌ಡಿಕೆಗೆ ಅಗತ್ಯವಿದೆ. ಚನ್ನಪಟ್ಟಣ ಅಖಾಡಕ್ಕೆ ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದು ಪ್ರಯಾಸದ ಕೆಲಸ. ಇನ್ನು ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಅವರನ್ನು ಕಣಕ್ಕಿಳಿಸಿದರೆ ಡಿಕೆಎಸ್ ಸಹೋದರರ ಹಣದ ಅಬ್ಬರದ ಮುಂದೆ ಈಜಿ ದಡಸೇರುವುದು ಸುಲಭವಲ್ಲ. ಇದಕ್ಕಾಗಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ಇರಾದೆ ದಳಪತಿಗಳದ್ದಾಗಿದೆ. ಯೋಗೇಶ್ವರ್‌ಗೆ ನೀರಾವರಿ ಯೋಜನೆ ಹಾಗೂ ಇನ್ನಿತರ ಕೆಲಸಗಳ ಮೂಲಕ ಚನ್ನಪಟ್ಟಣದಲ್ಲಿ ತಮ್ಮದೇ ಆದ ಮತಬ್ಯಾಂಕ್ ಹೊಂದಿದ್ದಾರೆ. ಇದರೊಂದಿಗೆ ಜೆಡಿಎಸ್ ಮತಗಳು ಸೇರಿದರೆ ಅನುಕೂಲವಾಗುತ್ತದೆ ಎಂಬುದು ದಳಪತಿಗಳ ಲೆಕ್ಕಾಚಾರ. ಇನ್ನು ಅಲ್ಪಸಂಖ್ಯಾತ ಮತಗಳು ಬಿಜೆಪಿ ಚಿಹ್ನೆಗೆ ಬರುವುದಿಲ್ಲ ಎಂಬ ಕಾರಣಕ್ಕೆ ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯ ಮೇಲೆ ನಿಲ್ಲಿಸುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಜೆಡಿಎಸ್ ಕೋಟೆ ಕಾಯುವ ಕೆಲಸವನ್ನು ಸೈನಿಕನಿಗೆ ವಹಿಸಲು ಸ್ಥಳೀಯ ಜೆಡಿಎಸ್ ಪಾಳಯದಲ್ಲೂ ಸಹಮತ ವ್ಯಕ್ತವಾಗುತ್ತಿದೆ.
ಕೈ ಪಾಳಯಕ್ಕೆ ಬಂಡೆಯೇ ಬಲ: 2009ರಲ್ಲಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಬಳಿಕ ಚನ್ನಪಟ್ಟಣದಲ್ಲಿ ಸಮರ್ಥ ನಾಯಕನನ್ನು ಬೆಳೆಸುವಲ್ಲಿ ಡಿ.ಕೆ. ಶಿವಕುಮಾರ್ ವಿಫಲಗೊಂಡಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್ ಬಿಟ್ಟುಹೋದ ಬಳಿಕ ನಡೆದಿರುವ 3 ಸಾರ್ವತ್ರಿಕ ಚುನಾವಣೆ, ಎರಡು ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಠೇವಣಿ ಉಳಿಸಿಕೊಂಡಿಲ್ಲ. ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬ ನಾಯ ಕನನ್ನು ಕಣಕ್ಕಿಳಿಸುತ್ತಾ ಬಂದಿರುವ ಪರಿಣಾಮ ಚನ್ನಪಟ್ಟಣದಲ್ಲಿ ಯಾರೂ ಸಂಘಟನಾತ್ಮಕವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಸ್ಥಳೀಯವಾಗಿ ನಾಯಕತ್ವ ಬೆಳೆಸುವಲ್ಲಿ ಡಿ.ಕೆ.ಶಿವಕುಮಾರ್ ವಿಫಲವಾಗಿದ್ದಾರೆ. ಸದ್ಯಕ್ಕೆ ಡಿ.ಕೆ.ಸುರೇಶ್ ಕಣಕ್ಕಿಳಿಸಿ ವ್ಯತ್ಯಾಸವಾದರೆ ಅದು ಬೇರೆಯ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಚನ್ನಪಟ್ಟಣದ ಮಾಜಿ ಸಚಿವ ವಿ.ವೆಂಕಟಪ್ಪ ಅವರ ಮೊಮ್ಮಗ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ ಅವರನ್ನು ಅಭ್ಯರ್ಥಿಯಾಗಿಸಲು ಚಿಂತನೆ ನಡೆದಿ ದೆಯಾದರೂ, ಮೈತ್ರಿ ಪಡೆಯ ನಡುವೆ ಅವರನ್ನು ಕಣಕ್ಕಿಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕಾಂಗ್ರೆಸ್ ಪಾಳಯಕ್ಕೆ ಬಲ ಎಂದು ಹೇಳಲಾಗುತ್ತಿದೆ.
-ಸು.ನಾ.ನಂದಕುಮಾರ್