Advertisement

Channapatna: ಮಹಿಳಾ ಕರಕುಶಲಕರ್ಮಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರ

11:34 PM Sep 17, 2023 | Team Udayavani |
ರಾಮನಗರ: ಇಪ್ಪತ್ತು ವರ್ಷಗಳಿಂದ ಬೊಂಬೆ ತಯಾರಿ ಉದ್ಯಮದಲ್ಲಿ ತೊಡಗಿಸಿ­ಕೊಂಡಿದ್ದ ಮಹಿಳಾ ಕರಕುಶಲಕರ್ಮಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪಿ.ಎಂ.ವಿಶ್ವಕರ್ಮ ಪ್ರಮಾಣಪತ್ರಕ್ಕೆ ಭಾಜನರಾಗಿದ್ದಾರೆ.

ನಮ್ಮ ದೇಶದ ಪುರಾತನ ಕುಶಲ ಕಲೆಯನ್ನು ಉತ್ತೇಜಿಸುವ ಹಾಗೂ ಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ ಯೋಜನೆಯ ಅಂಗವಾಗಿ, ಹೊಸದಿಲ್ಲಿಯಲ್ಲಿ ರವಿವಾರ ವಿಶ್ವಕರ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ತಾಲೂಕಿನ ಬೊಂಬೆ ತಯಾರಿಕೆಯಲ್ಲಿ ಕಾರ್ಯ­ನಿರ್ವಹಿಸುತ್ತಿರುವ ಮಹಿಳೆ ಶಾಲಿನಿ ಕರ್ನಾಟಕದಿಂದ ಪಿ.ಎಂ.ವಿಶ್ವಕರ್ಮ ಪ್ರಮಾಣ­ಪತ್ರ ಪಡೆದುಕೊಂಡಿದ್ದಾರೆ.

Advertisement

ಸಣ್ಣ ಆಟಿಕೆಗಳಿಂದ ಹಿಡಿದು ರಾಮ, ಸೀತೆ ವಿಗ್ರಹದ ವರೆಗೆ ವಿವಿಧ ಬೊಂಬೆಗಳನ್ನು ಅತ್ಯಂತ ಆಕರ್ಷಕವಾಗಿ ತಯಾರಿಸುವ ಕಲೆಯನ್ನು ಹೊಂದಿರುವ ಶಾಲಿನಿ, ಚನ್ನಪಟ್ಟಣದ ಆನಂದಪುರ ನಿವಾಸಿಯಾಗಿದ್ದು, ಇವರ ತಂದೆ, ತಾಯಿಯೂ ಕುಶಲಕರ್ಮಿಗಳಾಗಿದ್ದರು.
ನಗರದ ವಿವಿಧ ಬೊಂಬೆ ತಯಾರಿಕಾ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಪ್ರಸ್ತುತ ಹಳೇ ಡೇರಾದಲ್ಲಿ ಇಶಾ ಎಂಬ ಬೊಂಬೆ ತಯಾರಿಕಾ ಘಟಕದಲ್ಲಿ ಕುಶಲ ಕರ್ಮಿಯಾಗಿ ಕೆಲಸ ಮಾಡುತ್ತಿದ್ದಾರೆ.

ಮಹಿಳೆಯನ್ನು ಗುರುತಿಸಿದ್ದು ಹೇಗೆ?
ಎಲೆ ಮರೆ­ಕಾಯಿಯಂತಿದ್ದ ಶಾಲಿನಿ ಬೊಂಬೆ ತಯಾರಿಕಾ ಘಟಕದಲ್ಲಿ ಪರಿಣಿತ ಕುಶಲಕರ್ಮಿಯಾಗಿದ್ದು, ಇವರ ಕಾರ್ಯವನ್ನು ಗುರುತಿಸಿದ ಮೆಹದವಿಯಾ ವೆಲ್‌ಫೇರ್‌ ಟ್ರಸ್ಟ್‌ ಎಂಬ ಕುಶಲಕರ್ಮಿಗಳ ಹಿತಾಸಕ್ತಿಗಾಗಿ ಕಾರ್ಯ­ನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಯೊಂದು, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಮಾಣ ಪತ್ರ ಕಾರ್ಯಕ್ರಮಕ್ಕೆ ಮಹಿಳೆ­ಯನ್ನು ಶಿಫಾರಸು ಮಾಡಿದೆ. ಕಾರ್ಯಕ್ರಮದ ಆಯೋಜಕರು ಮಹಿಳೆಯ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಶಾಲಿನಿ ಅವರಿಗೆ ಪ್ರಧಾನಿ ಮೋದಿ ಅವರಿಂದ ಪ್ರಮಾಣ ಪತ್ರ ಕೊಡಿಸಿದ್ದಾರೆ.

1 ಲಕ್ಷ ರೂ. ನೆರವು
ಪ್ರಧಾನಮಂತ್ರಿಗಳಿಂದ ಪ್ರಮಾಣ ಪತ್ರ ಸ್ವೀಕರಿಸಿರುವ ಶಾಲಿನಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಕೇಂದ್ರ ಸರಕಾರದಿಂದ 1 ಲಕ್ಷ ರೂ. ಹಣಕಾಸಿನ ನೆರವನ್ನು ಅವರ ಖಾತೆಗೆ ನೇರನಗದು ವರ್ಗಾವಣೆ ಮೂಲಕ ನೀಡಲಾಗಿದೆ. ಇನ್ನೂ ಹೆಚ್ಚಿನ ನೆರವು ನೀಡುವ ಭರವಸೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next