Advertisement

ಭತ್ತ ಖರೀದಿ ನಿಯಮ ಬದಲಿಸಲು ರೈತರ ಆಗ್ರಹ

04:09 PM Feb 20, 2020 | Naveen |

ಚನ್ನಪಟ್ಟಣ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲು ಸಣ್ಣ ಅತಿಸಣ್ಣ ಹಾಗೂ ದೊಡ್ಡ ರೈತರೆಂಬ ನಿಯಮ ರೂಪಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕ್ರಮಕ್ಕೆ ಜಿಲ್ಲೆಯ ರೈತರಿಂದ ವಿರೋಧ ವ್ಯಕ್ತವಾಗಿದ್ದು, ಕೂಡಲೇ ನಿಯಮ ತೆಗೆದು ಹಾಕಿ ಎಲ್ಲರಿಂದಲೂ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವಂತೆ ರೈತರು ಆಗ್ರಹಪಡಿಸಿದ್ದಾರೆ.

Advertisement

ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ನಿಗಮದ ನಿಯಮ ಒಪ್ಪು ಸಾಧ್ಯವಿಲ್ಲ. ರೈತರಿಗೆ ನಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಮಾಡುತ್ತಿದೆ. ಅದರಲ್ಲಿ ಸಣ್ಣ, ದೊಡ್ಡ ರೈತರೆಂಬ ಬೇಧ ಏತಕ್ಕೆ ಎಂದು ರೈತರು ಪ್ರಶ್ನಿಸಿದ್ದಾರೆ. ಐದು ಎಕರೆ ಜಮೀನು ಹೊಂದಿರುವ ರೈತರು ದೊಡ್ಡ ರೈತರೆಂದು ಯಾವ ಮಾನದಂಡದ ಮೂಲಕ ಅಳೆಯಲಾಗುತ್ತದೆ. ಇದನ್ನು ಸರ್ಕಾರ ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ.

ಕೆಲವು ರೈತರು ಐದು ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದರೂ ಮೂರು, ನಾಲ್ಕು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿರುತ್ತಾರೆ. ನಾಲ್ಕು ಎಕರೆಗೆ ಕನಿಷ್ಠ 40 ಕ್ವಿಂಟಲ್‌ ಭತ್ತ ಖರೀದಿಸುವ ನಿಯಮವನ್ನು ನಿಗಮ ರೂಪಿಸಿದೆ. ದೊಡ್ಡ ರೈತರೆಂಬ ಅವೈಜ್ಞಾನಿಕ ನಿರ್ಧಾರದಿಂದ ರೈತರು ವಂಚಿತರಾಗುತ್ತಿದ್ದಾರೆ.

ಸರ್ಕಾರ ಕೂಡಲೇ ಇದನ್ನು ಸರಿಪಡಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ. ಸಂಕಷ್ಟದಿಂದ ಪಾರು ಮಾಡಲಿ: ಸಣ್ಣ ಮತ್ತು ದೊಡ್ಡ ರೈತರೆನ್ನುವ ಬೇಧವನ್ನು ನಿಗಮ ಮಾಡುತ್ತಿರುವುದು ಸರಿಯಲ್ಲ. ಎಲ್ಲ ರೈತರೂ ಒಂದೇ ರೀತಿಯಲ್ಲಿ ಬೆಳೆ ಬೆಳೆದಿರುತ್ತಾರೆ. ಎಲ್ಲರಿಗೂ ನಷ್ಟವಾಗುತ್ತದೆ. ಅದು ಕೇವಲ ಸಣ್ಣ, ಅತಿಸಣ್ಣ ರೈತರಿಗೆ ಮಾತ್ರವಲ್ಲ. ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿದ್ದರೆ, ಎಲ್ಲ ಜಮೀನಿನಲ್ಲೂ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಇದನ್ನು ಸರ್ಕಾರ ತಿಳಿದುಕೊಂಡು ನಿಗಮಕ್ಕೆ ಸೂಚನೆ ನೀಡಿ ಭತ್ತ ಖರೀದಿ ಮಾಡಿ ರೈತರನ್ನು ಸಂಕಷ್ಟದಿಂದ ಪಾರುಮಾಡಲಿ ಎಂದು ರೈತರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗೂ ಮನವಿ: ಸಣ್ಣ, ದೊಡ್ಡ ರೈತರೆಂಬ ಬೇಧ ಮಾಡದೆ ನಿಗಧಿಪಡಿಸಿರುವಷ್ಟು ಭತ್ತವನ್ನು ಎಲ್ಲ ರೈತರಿಂದ ಖರೀದಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ರೈತರು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಾಲ್ಕು ಎಕರೆಯಲ್ಲಿ ಬತ್ತ ಬೆಳೆದಿದ್ದರೂ, ಅರ್ಹರಲ್ಲ ಎಂದು ನಮ್ಮ ಅರ್ಜಿ ತಿರಸ್ಕರಿಸಲಾಗಿದೆ. ಇದ್ಯಾವ ನ್ಯಾಯ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

ಎಷ್ಟೇ ಜಮೀನು ಇದ್ದರೂ ರೈತರು ಇಂದು ಬೆಳೆಗೆ ತಕ್ಕ ಬೆಲೆ ಇಲ್ಲದೆ ನಷ್ಟದ ಹಾದಿ ತುಳಿದು ಕೊನೆಗೆ ಆತ್ಮಹತ್ಯೆ ನಿರ್ಧಾರದತ್ತ ಹೊರಟಿರುವುದು ಸರ್ಕಾರಕ್ಕೆ ತಿಳಿದೇ ಇದೆ. ಈ ರೀತಿ ನಿಯಮಗಳನ್ನು ಹೇರಿ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡದೆ ಎಲ್ಲ ರೈತರು ಬೆಳೆದಿರುವ ಭತ್ತ ನಿಗದಿಪಡಿಸಿರುವ ಪ್ರಮಾಣದಲ್ಲಿ ಖರೀದಿ ಮಾಡಿ ಅವರ ಜೀವನಕ್ಕೆ ನೆರವಾಗಬೇಕಿದೆ.

ನಾಲ್ಕು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಬೆಂಬಲ ಬೆಲೆಯಡಿ
ಖರೀದಿ ಮಾಡಲು ಅರ್ಜಿ ಸಲ್ಲಿಸಿದರೆ, ನೀವು ದೊಡ್ಡ ರೈತರು ಎನ್ನುವ ಕಾರಣ ನೀಡಿ ತಿರಸ್ಕರಿಸಲಾಗಿದೆ. ಐದು ಎಕರೆ ಜಮೀನು ಇದ್ದರೂ ಭತ್ತ ಬೆಳೆದಿರುವುದು ಕೇವಲ ನಾಲ್ಕು ಎಕರೆ ಪ್ರದೇಶದಲ್ಲಿ. ಆಹಾರ ನಿಗಮ ಇಂಥಹ ಅವೈಜ್ಞಾನಿಕ ನಿಯಮ ಹೇರುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ.
ಸುಧಾಕರ್‌, ರೈತ, ಚಕ್ಕಲೂರು.

ಕೃಷಿ ಇಲಾಖೆಯಲ್ಲಿ ಈಗಾಗಲೇ ರೈತರ ಜಮೀನಿನ ಬಗ್ಗೆ ದತ್ತಾಂಶ ದಾಖಲಾಗಿದೆ. ಆ ಮಾಹಿತಿ ಆಧಾರದ ಮೇಲೆ ಅರ್ಜಿ ಸಲ್ಲಿಸಿರುವ ರೈತರ ವಿವರ ಪಡೆದು ಖರೀದಿ ಮಾಡುತ್ತಿದ್ದೇವೆ. ಐದು ಎಕರೆ ಮೇಲ್ಪಟ್ಟ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಬಹುದೆನ್ನುವ ನಿಯಮ ಬಂದರೆ ಖರೀದಿ ಮಾಡುತ್ತೇವೆ.
ಕೃಷ್ಣಕುಮಾರ್‌, ಉಪನಿರ್ದೇಶಕರು, ಆಹಾರ
ಮತ್ತು ನಾಗರೀಕ ಸರಬರಾಜು ನಿಗಮ.

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next