Advertisement
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿ ಎಸ್ ಅಭ್ಯರ್ಥಿ, ದೈವಭಕ್ತರಾದ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ಗೆದ್ದು, ಅದೃಷ್ಟದಾಟದಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿ ಗದ್ದುಗೆ ನಿರೀಕ್ಷೆಯಲ್ಲಿದ್ದಾರೆ. 2018ರ ವಿಧಾನಸಭಾ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು “ಸ್ವಾಭಿಮಾನಿ ಸಂಕಲ್ಪ ನಡಿಗೆ’ ಮೂಲಕ ಕ್ಷೇತ್ರ ಸುತ್ತಿರುವ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ತಂತ್ರಗಾರಿಕೆಯನ್ನು ಪ್ರಯೋಗಿಸುತ್ತಿದ್ದಾರೆ. ಈ ಇಬ್ಬರು ಛಲದಂಕಮಲ್ಲರ ನೇರಾನೇರ ಹಣಾಹಣಿಯಿಂದ ಚನ್ನಪಟ್ಟಣ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿ ರಾಜ್ಯ ದ ಗಮನ ಸೆಳೆದಿದೆ.
Related Articles
Advertisement
ಕಾಂಗ್ರೆಸ್ ಆತ್ಮವಿಶ್ವಾಸ: ಕಾಂಗ್ರೆಸ್ ಅಭ್ಯ ರ್ಥಿ, ರಾಮನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗಂಗಾಮತಸ್ಥ ಸಮಾಜದ ಎಸ್. ಗಂಗಾಧರ್ ಕ್ಷೇತ್ರಾದ್ಯಂತ ಮತಯಾ ಚನೆ ಯಲ್ಲಿ ತೊಡಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೆಂ.ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಒಂದು ಸುತ್ತು ಕ್ಷೇತ್ರದಲ್ಲಿ ಪ್ರಚಾರ ಮಾಡಿರುವುದು ಕಾಂಗ್ರೆಸ್ ಅಭ್ಯರ್ಥಿಯಲ್ಲಿ ಆತ್ಮವಿಶ್ವಾಸ ಮೂಡಿಸಿದೆ.
ಕಡಿಮೆ ಅಂತರದಲ್ಲಿ ಗೆಲುವು: ಡಿಕೆಎಸ್ ಸಹೋದರರ ಬಾವ ಸಿ.ಪಿ.ಶರತ್‌ಚಂದ್ರ ಅವರು ಆಪ್ ಅಭ್ಯರ್ಥಿಯಾಗಿದ್ದು, ಅವರು ಕೂಡ ತಮ್ಮದೇ ಆದ ಪಡೆಯೊಂದನ್ನು ಕಟ್ಟಿಕೊಂಡು ಕ್ಷೇತ್ರದಲ್ಲಿ ಅಬ್ಬರ ಹಾಗೂ ಆಡಂಬರಕ್ಕೆ ಆಸ್ಪದ ನೀಡದೆ, ಮನೆ, ಮನೆಗೆ ತೆರಳಿ ಸರಳವಾಗಿ ಮತ ಕೇಳುವ ಕಾಯಕದಲ್ಲಿ ಮುಂದಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಬರೋಬ್ಬರಿ 15 ಅಭ್ಯರ್ಥಿಗಳು ಕಣದಲ್ಲಿದ್ದರೂ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಯೋಗೇಶ್ವರ್ ನಡುವೆ ನೇರಾನೇರ ಹಣಾಹಣಿ ಇದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಕಳೆದ ಬಾರಿ ಜೆಡಿಎಸ್‌ನ ಕುಮಾರಸ್ವಾಮಿ ಅವರು ಸುಮಾರು 21 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಈ ಸಲ ಯಾರೇ ಗೆದ್ದರೂ ಗೆಲುವಿನ ಅಂತರ ಹೆಚ್ಚಿರುವುದಿಲ್ಲ ಎಂಬ ವಾತಾವರಣವಿದೆ.
ಮಾಜಿ, ಹಾಲಿ ಪ್ರಧಾನಿಗಳ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರು ಚನ್ನಪಟ್ಟಣದಲ್ಲಿ ಬಹಿರಂಗ ಪ್ರಚಾರ ಸಭೆಯನ್ನು ನಡೆಸಿದ್ದು, ಸ್ವಲ್ಪ ಮಟ್ಟಿಗೆ ನೆರವಿಗೆ ಬಂದಿದೆ ಎಂದು ಕೆಲವರು ವಾದಿಸಿದರೆ, ಪ್ರಧಾನಿ ಭೇಟಿ ಸಂದರ್ಭದಲ್ಲಿ ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ತಿಕ್ಕಾಟ ಆರಂಭವಾಗಿದ್ದು, ಇದು ಸೈನಿಕನಿಗೆ ಮೈನಸ್ ಆದರೂ ಅಚ್ಚರಿ ಇಲ್ಲ ಎಂಬ ವಿಶ್ಲೇಷಣೆಯೂ ಕ್ಷೇತ್ರದ ರಾಜಕೀಯ ಚಿಂತಕರಿಂದ ಕೇಳಿ ಬಂದಿದೆ. ಅದೇ ದಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡಿ, ಮತ ದಾರರಿಗೆ ತಮ್ಮ ಅವಧಿ ಹಾಗೂ ಕುಮಾರಸ್ವಾಮಿ ಸ್ವಾಮಿ ಅವಧಿಯಲ್ಲಿ ಚನ್ನಪಟ್ಟಣ ಕ್ಷೇತ್ರ ಹಾಗೂ ರಾಮನಗರ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ನೆನಪಿಸಿದ್ದಾರೆ.
ನೀರಾವರಿಯ ಜಟಾಪಟಿ!: ಒಣಭೂಮಿ ನಂಬಿ ಪ್ರಯೋಜನವಿಲ್ಲ ಎಂದು ಬೆಂಗಳೂರಿನ ಬಾರ್‌ಗಳು ಹಾಗೂ ಮತ್ತಿತರೆ ಕಡೆಗೆ ಉದ್ಯೋಗ ಅರಸಿ ಹೊರಟಿದ್ದ ಕ್ಷೇತ್ರದ ಯುವಜನರಿಗೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸಿ ಬದುಕಿಗೆ ಭರವಸೆ ತುಂಬಿದ್ದನ್ನು ಸಿಪಿವೈ ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆಯಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ನೀರಾವರಿ ಯೋಜನೆಗಳಿಗೆ ಆಸರೆಯಾಗಿರುವ ಇಗ್ಗಲೂರು ಬ್ಯಾರೇಜ್(ಎಚ್.ಡಿ.ದೇವೇಗೌಡ ಬ್ಯಾರೇಜ್)ಅನ್ನು ರೈತರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಿದ್ದ ಆ ದಿನಗಳನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕ್ಷೇತ್ರದ ಜನರಿಗೆ ನೆನಪಿಸಿದ್ದಾರೆ. ತಮ್ಮದೇ ಹೆಸರಿನ ಅಣೆಕಟ್ಟೆಗೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ತಮ್ಮ ಅಧಿಕಾರಾವಧಿಯ ಈ ಕೆಲಸವನ್ನು ನೆನಪಿಸುವ ಮೂಲಕ ಸಿ.ಪಿ. ಯೋಗೇ ಶ್ವರ್‌ರಿಗೆ ಅವರ ಕೆರೆ ತುಂಬಿಸಿದ ಸಾಧನೆ ಟ್ರಂಪ್ ಕಾರ್ಡ್ ಗೆ ಠಕ್ಕರ್ ಕೊಟ್ಟಿದ್ದಾರೆ.
-ಎಂ.ಶಿವಮಾದು