ರಾಮನಗರ: ಬೆಳಗ್ಗೆ ದಿಢೀರ್ ಕುಸಿದು ಬಿದ್ದು ಸತ್ತವೆಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಮಧ್ಯಾಹ್ನ ಆತ ಎದ್ದು ಕುಳಿತ. ಆದರೆ ದುರದೃಷ್ಟವಶಾತ್ ಆ ವ್ಯಕ್ತಿ ಸಂಜೆ ಹೊತ್ತಿಗೆ ಕೊನೆಯುಸಿರೆಳೆಯುವ ಮೂಲಕ ವಿಧಿಯ ಕೈ ಮೇಲಾಯಿತು.
ಇಂಥದ್ದೊಂದು ವಿಚಿತ್ರ ಪ್ರಸಂಗಕ್ಕೆ ಚನ್ನಪಟ್ಟಣ ತಾಲೂಕು ಗ್ರಾಮಾಂ ತರ ಪೊಲೀಸ್ ಠಾಣೆ ವ್ಯಾಪ್ತಿಯ ಹುಚ್ಚಯ್ಯನದೊಡ್ಡಿ ಗ್ರಾಮ ಸಾಕ್ಷಿಯಾಯಿತು.
ಗ್ರಾಮದ ಕೂಲಿಕಾರ್ಮಿಕ ಶಿವರಾಮು (57) ಬೆಳಗ್ಗೆ 7 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದು, ತತ್‌ಕ್ಷಣ ಕುಟುಂಬದವರು ಚಿಕಿತ್ಸೆಗೆಂದು ಚನ್ನಪಟ್ಟಣಕ್ಕೆ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಇವರ ಉಸಿರು ನಿಂತಿತು. ಬಳಿಕ ಮನೆಗೆ ತಂದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿವರಾಮು ಎದ್ದು ಕುಳಿತಿದ್ದಾರೆ.
ನೆರೆದವರೆಲ್ಲರೂ ಅಚ್ಚರಿಯಿಂದ ನಗರದ ಬಿಜೆಎಲ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ಶಿವರಾಮುವಿಗೆ ಹೃದಯಾಘಾತವಾಗಿದ್ದು, ಬೆಂಗ ಳೂರಿಗೆ ಕರೆದೊಯ್ಯಲು ತಿಳಿಸಿದ್ದಾರೆ.
ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಮತ್ತೆ ಅಸ್ವಸ್ಥಗೊಂಡಿದ್ದು, ಅವರನ್ನು ರಾಮನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದಾಗ ಶಿಮ ರಾಮು ಮೃತಪಟ್ಟಿದ್ದಾರೆ ಎಂದರು.