ಬೆಳಗಾವಿ: ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾದರೂ ಹೆದ್ರಾಬಾದ್‌ನ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಕಾಮುಕರ ಎನ್‌ಕೌಂಟರ್ ಮಾಡಿದರೂ ಮಹಿಳೆಯರ ಮೇಲಿನ ಕಿರುಕುಳ, ಅತ್ಯಾಚಾರ ಮಾತ್ರ ಕಡಿಮೆ ಆಗುತ್ತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ಇಂಥ ಪ್ರಕರಣಗಳಿಗೆ ಲಗಾಮು ಇಲ್ಲದಂತಾಗಿದೆ.
ಕಾಮುಕರ ಅಟ್ಟಹಾಸವನ್ನು ನಿಯಂತ್ರಣ ತರಲು ಆಗುತ್ತಿಲ್ಲ. ದಿನೇ-ದಿನೇ ಇಂಥ ಕೇಸುಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಮಹಿಳೆಯರಿಗೆ ಅಗತ್ಯ ರಕ್ಷಣೆ ಬೇಕಾಗಿದೆ. ಕಳೆದ ಮೂರು ವರ್ಷಗಳ ಅವ ಧಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಮಾನಭಂಗ ಪ್ರಕರಣಗಳು ಹೆಚ್ಚಾಗುತ್ತ ಹೋಗುತ್ತಿದ್ದು, ಕಳೆದ ವರ್ಷಕ್ಕಿಂತಲೂ ಈ ವರ್ಷ ಮಹಿಳಾ ದೌರ್ಜನ್ಯ ಕೇಸುಗಳು ಅಧಿ ಕವಾಗಿವೆ. ಪೊಲೀಸ್ ಇಲಾಖೆ ಮಹಿಳಾ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಮಹಿಳೆಯರ ಶಿಕ್ಷಣ ಪ್ರಮಾಣ ಹೆಚ್ಚಾಗುತ್ತಿದ್ದು, ಎಲ್ಲ ರಂಗದಲ್ಲಿಯೂ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರದ್ದೇ ಮೇಲುಗೈ ಆಗುತ್ತಿದೆ. ಆದರೆ ವರದಕ್ಷಿಣೆ ಕಿರುಕುಳಕ್ಕೆ ತಡೆ ಇಲ್ಲದಂತಾಗಿದೆ.
ಕಳೆದ ಮೂರು ವರ್ಷಗಳ ಅವಧಿ ಯಲ್ಲಿ 688 ವರದಕ್ಷಿಣೆಗಾಗಿ ಕಿರುಕುಳ ಪ್ರಕರಣಗಳು ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ವರದಕ್ಷಿಣೆಗಾಗಿ 13 ಮಹಿಳೆಯರನ್ನು ಬಲಿ ತೆಗೆದುಕೊಳ್ಳಲಾಗಿದೆ. 147 ಆತ್ಯಾಚಾರ ಪ್ರಕರಣಗಳು ನಡೆದಿವೆ. ಬಾಲಕಿಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ: ಅಪ್ರಾಪ್ತ ಬಾಲಕಿಯರ ಮೇಲೂ ಅತ್ಯಾಚಾರಗಳು ನಡೆಯುತ್ತಿದ್ದು, ಪೋಕ್ಸೋ ಕಾಯ್ದೆಯಡಿ ಮೂರು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಕೇಸುಗಳು ದಾಖಲಾಗಿವೆ. 2017ರಲ್ಲಿ 45, 2018ರಲ್ಲಿ 63 ಹಾಗೂ 2019ರಲ್ಲಿ 254 ಕೇಸು ದಾಖಲಾಗಿದ್ದರೆ, 2020ರ ಮೊದಲ ಎರಡು ತಿಂಗಳ ಆವ ಧಿಯಲ್ಲಿ 36 ಕೇಸುಗಳು ಪೋಕ್ಸೋ ಕಾಯ್ದೆಯಡಿ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಪೋಷಕರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ದೂರು ದಾಖಲಿಸಿದರೆ ಮುಂದೆ ಬಾಲಕಿಯ ಭವಿಷ್ಯಕ್ಕೆ ಕುತ್ತು ಬರಬಹುದು ಎಂಬ ಕಾರಣದಿಂದ ಆತಂಕಕ್ಕೀಡಾಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿಯಂತೂ ಆರೋಪಿಗಳಿಂದಜೀವ ಬೆದರಿಕೆಯಿಂದ ಪೊಲೀಸ್ ಠಾಣೆಗೆ ಬರಲು ಹಿಂಜರಿಯುತ್ತಿದ್ದಾರೆ.
ಬಾಲಕಿಯರ ಮೇಲೆ ಅತ್ಯಾಚಾರ ನಡೆದಾಗ ಕೂಡಲೇ ಪೋಷಕರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಬೇಕು. ಯಾವುದೇ ಬೆದರಿಕೆಗೆ ಜಗ್ಗದೇ ದೂರು ನೀಡಿದರೆ ನೊಂದವರಿಗೆ ನ್ಯಾಯ ಸಿಗಲು ಸಾಧ್ಯವಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
ಮಹಿಳೆಯರ ರಕ್ಷಣೆಗಿದೆ ಚನ್ನಮ್ಮ ಪಡೆ : ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳಿಗೆ ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು, ಸಹಾಯ ಕಲ್ಪಿಸಲು ಹಾಗೂ ರಕ್ಷಣೆ ನೀಡುವ ನಿಟ್ಟಿನಲ್ಲಿ ವಿಶೇಷವಾಗಿ ಚನ್ನಮ್ಮ ಪಡೆ ರೂಪಿಸಲಾಗಿದೆ. ಮಹಿಳೆಯರ ರಕ್ಷಣೆಗಾಗಿ ಚನ್ನಮ್ಮ ಪಡೆ ಹಗಲಿರುಳು ಶ್ರಮಿಸುತ್ತಿದೆ. ಚನ್ನಮ್ಮ ಪಡೆಯಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.
ಲಾಕ್‌ಡೌನ್ ವೇಳೆ ದೌರ್ಜನ್ಯಕ್ಕೆ ಕಡಿವಾಣ : ಲಾಕ್‌ಡೌನ್ ಸಮಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ. ಕೋವಿಡ್ ಮಹಾಮಾರಿಯ ಅಟ್ಟಹಾಸದಿಂದ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್‌ಡೌನ್ ವೇಳೆ ಮಹಿಳಾ ದೌರ್ಜನ್ಯ, ಅತ್ಯಚಾರ, ಮಾನಭಂಗದಂತಹ ಪ್ರಕರಣಗಳು ದಾಖಲಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಲಾಕ್‌ಡೌನ್ ಮುಗಿದಾಗ ಮತ್ತೆ ಇಂಥ ದೂರುಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಮಾಣಕ್ಕಿಂತಲೂ ಈ ವರ್ಷದಲ್ಲಿ ದೌರ್ಜನ್ಯಗಳ ಸಂಖ್ಯೆ ಇಳಿಮುಖಗೊಂಡಿದೆ.
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಗೆ ಸಂಬಂಧಿಸಿದಂತೆ ನಗರದ ವ್ಯಾಪ್ತಿಯಲ್ಲಿ ಚನ್ನಮ್ಮ ಪಡೆ ಕಾರ್ಯನಿರ್ವಹಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಪ್ರಕರಣಗಳು ನಡೆದಾಗ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಕಡಿಮೆ ಆಗುತ್ತಿವೆ. –
ಸೀಮಾ ಲಾಟ್ಕರ್, ಡಿಸಿಪಿ, ಬೆಳಗಾವಿ
–ಭೈರೋಬಾ ಕಾಂಬಳೆ