ಚನ್ನಗಿರಿ: ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡ ಬೀಳುವ ಸ್ಥಿತಿಯಲ್ಲಿದುದನ್ನು ಕಂಡ ಗ್ರಾಮಸ್ಥರು ಒಟ್ಟುಗೂಡಿ ಶಾಲಾ ಕಟ್ಟಡವನ್ನು ನೆಲಸಮಗೊಳಿಸಿ ಮುಂದೆ ನಡೆಯಬಹುದಾಗಿದ್ದ ದೊಡ್ಡ ದುರಂತವನ್ನು ತಡೆದಿದ್ದಾರೆ.
ತಾಲೂಕಿನ ಹೊನ್ನೆಮರದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಎರಡು ಶಾಲಾ ಕೊಠಡಿಗಳನ್ನು ಸ್ವಂತ ಖರ್ಚಿನಿಂದ ನೆಲಸಮಗೊಳಿಸುವ ಮೂಲಕ ಮುಂಜಾಗ್ರತೆ ಮೆರೆದಿದ್ದಾರೆ.
ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 4ನೇ ತರಗತಿವರೆಗೆ ಒಟ್ಟು 14ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಒಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ ತಲಾ ಎರಡು ಕೊಠಡಿಗಳ ಎರಡು ಕಟ್ಟಡಗಳಿದ್ದು, ಅದರಲ್ಲಿ ಒಂದು ಕಟ್ಟಡ ಶಿಥಿಲವಾಗಿತ್ತು. ಇನ್ನುಳಿದ ಎರಡು ಕೊಠಡಿಗಳಲ್ಲಿ ಒಂದನ್ನು ಬಿಸಿಯೂಟ ತಯಾರಿಕೆಗೆ ಬಳಸಿಕೊಂಡರೆ, ಮತ್ತೂಂದನ್ನು ತರಗತಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದುಸ್ಥಿಯಲ್ಲಿರುವ ಕೊಠಡಿಗಳಿಂದ ಯಾವುದೇ ಸಂದರ್ಭದಲ್ಲಿ ಮಕ್ಕಳಿಗೆ ಅಪಾಯ ಒದಗಬಹುದು ಎಂದು, ಆಕೊಠಡಿಗಳನ್ನು ನೆಲಸಮಗೊಳಿಸುವಂತೆ ಕಳೆದ 13ವರ್ಷಗಳ ಹಿಂದೆಯಿಂದಲೂ ಶಿಕ್ಷಣ ಇಲಾಖೆ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ತಮ್ಮ ಮಕ್ಕಳ ಸುರಕ್ಷತೆಗಾಗಿ ಗ್ರಾಮಸ್ಥರೇ ಜೆಸಿಬಿ ಮೂಲಕ ಕೊಠಡಿಗಳನ್ನು ನೆಲಸಮ ಗೊಳಿಸಿದ್ದಾರೆ.
ಶಿಥಿಲ ಕಟ್ಟಡ-ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು: ಶಿಥಿಲಗೊಂಡ ಕಟ್ಟಡವು ಶಾಲೆಯ ಪಕ್ಕದಲ್ಲಿಯೇ ಇದ್ದು ಮಕ್ಕಳು ಆಟವಾಡುವಾಗ ಅಥವಾ ಯಾವುದೇ ಸಂದರ್ಭದಲ್ಲಿ ಬೀಳಬಹುದು ಎಂಬ ಭಯದಲ್ಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಇನ್ನೂಳಿದವರು ಈ ವ್ಯವಸ್ಥೆಯಿಂದ ಬೇಸತ್ತು ಸಾಲಸೂಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡಿದ್ದಾರೆ. ಒಟ್ಟಾರೆ ಅನಾಹುತ ತಪ್ಪಿಸಲು ಗ್ರಾಮಸ್ಥರೇ ಮುಂದಾಗಿರುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿಥಿಲಗೊಂಡಿರುವ ಕಟ್ಟಡದಿಂದ ಮಕ್ಕಳಿಗೆ ಯಾವುದೇ ವೇಳೆ ಅನಾಹುತ ಆಗಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಕ್ಯಾರೆ ಎಂದಿಲ್ಲ. 13ವರ್ಷಗಳಿಂದಲೂ ಕಟ್ಟಡ ದುರಸ್ಥಿಯಲ್ಲಿದೆ. ಸದ್ಯ ಕಟ್ಟಡದ ಗೊಡೆಗಳು ಯಾವ ಸಮಯದಲ್ಲಾದರೂ ಬೀಳಬಹುದು ಎಂದು ಆ ಕೊಠಡಿಗಳನ್ನು ನಮ್ಮ ಖರ್ಚಿನಿಂದ ನೆಲಸಮಗೊಳಿಸಿದ್ದೇವೆ.
ಎಸ್.ಎಸ್. ರವಿ,
ಗ್ರಾಪಂ ಮಾಜಿ ಸದಸ್ಯ.
ಶಾಲೆ ಕಟ್ಟಡದ ದುಸ್ಥಿತಿಯಿಂದ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಭಯಭೀತರಾಗಿದ್ದಾರೆ. ಸಕಾರದಿಂದ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದರೂ ಪ್ರಯೋಜನವಿಲ್ಲ. ಮೊದಲು ಮೂಲಭೂತ ಸೌಲಭ್ಯಗಳ ನಿರ್ಮಾಣ ಮಾಡಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ.
ರುದ್ರೇಶ್,
ತಾಲೂಕು ಎನ್‌ಎಸ್‌ಯುಐ ಸಂಚಾಲಕ
ತಾಲೂಕಿನಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಪಟ್ಟಿಯನ್ನು ದಾವಣಗೆರೆ ಡಿಡಿಪಿಐ ಬಳಿ ಕಳುಹಿಸಿಕೊಡಲಾಗಿದೆ. ಅದರಲ್ಲಿ ಹೊನ್ನೆಮರದಹಳ್ಳಿ ಶಾಲೆ ಕೂಡ ಇದೆ. ಈ ಕುರಿತು ಗ್ರಾಮಸ್ಥರು ಕೂಡ ಗಮನಕ್ಕೆ ತಂದಿದ್ದರು. ಡಿಡಿಪಿಐ ಆದೇಶಕ್ಕಾಗಿ ಕಾಯುತ್ತಿದ್ದೆವು. ಅಷ್ಟರಲ್ಲಿ ಗ್ರಾಮಸ್ಥರೇ ನನ್ನ ಗಮನಕ್ಕೆ ತಂದು ಶಾಲಾ ಕೊಠಡಿಯನ್ನು ನೆಲಸಮಗೊಳಿಸಿದ್ದಾರೆ.
ಮಂಜುನಾಥ್,
ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ.
ಶಶೀಂದ್ರ ಸಿ.ಎಸ್. ಚನ್ನಗಿರಿ.