ಚನ್ನಗಿರಿ: ಉಪವಿಭಾಗಾಧಿಕಾರಿ ಕಚೇರಿಯನ್ನು ಚನ್ನಗಿರಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಿ ನ್ಯಾಯವಾದಿಗಳ ಸಂಘ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿರಿಸಿದ್ದು, ವಿವಿಧ ಸಂಘ, ಸಂಸ್ಥೆಗಳು ಹಾಗೂ ಮಾಜಿ ಶಾಸಕರಿಬ್ಬರು ಸಾಥ್ ನೀಡುವ ಮೂಲಕ ಪಟ್ಟಣದಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಭೌಗೋಳಿಕವಾಗಿ ಅತ್ಯಂತ ವಿಶಾಲವಾಗಿರುವ ಚನ್ನಗಿರಿ ತಾಲೂಕಿಗೆ ನೀಡಬೇಕಾದ ವಿಭಾಗಾಧಿಕಾರಿ ಕಚೇರಿಯನ್ನು ಹೊನ್ನಾಳಿಗೆ ನೀಡುವುದು ಎಷ್ಟರ ಮಟ್ಟಿಗೆ ಸರಿ. ಎಲ್ಲ ರೀತಿಯಲ್ಲೂ ಅರ್ಹವಾಗಿರುವ ಚನ್ನಗಿರಿ ತಾಲೂಕು ಪರಿಗಣಿಸಿ ಉಪವಿಭಾಗಾಧಿಕಾರಿ ಕಚೇರಿಯನ್ನು ಇಲ್ಲಿಯೇ ಪ್ರಾರಂಭಿಸಬೇಕು. ಇಲ್ಲಿನ ಜನಸಂಖ್ಯೆ ಕೂಡ ಹೆಚ್ಚಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಡಿವೈಎಸ್‌ಪಿ, ಉಪವಿಭಾಗಾಧಿಕಾರಿ ಕಚೇರಿಯನ್ನು ಪ್ರಾರಂಭಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿದ್ದ ಕಾರಣ ಸದ್ಯ ಡಿವೈಎಸ್‌ಪಿ ಕಚೇರಿ ಚನ್ನಗಿರಿಯಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವವರು ಉಪವಿಭಾಗಾಧಿಕಾರಿ ಕಚೇರಿಯನ್ನು ಚನ್ನಗಿರಿಯಲ್ಲಿ ಪ್ರಾರಂಭಿಸುವುದಕ್ಕೆ ಪ್ರಯತ್ನ ಪಡಲಿ. ಆದರೆ ಅವರಿಂದ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸುಳ್ಳು ಭರವಸೆಯ ರಾಜಕಾರಣ ಬಹಳದಿನ ಉಳಿಯುವುದಿಲ್ಲ. ತಾಲೂಕಿನ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಅದಕ್ಕಾಗಿ ನಾನು ನಿರಂತರ ಹೋರಾಟ ನಡೆಸುತ್ತೇನೆ. ಚನ್ನಗಿರಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ತೆರೆಯುವವರೆಗೂ ಯಾವುದೇ ಕಾರಣಕ್ಕೂ ಹೋರಾಟವನ್ನು ಕೈ ಬಿಡುವುದಿಲ್ಲ. ಎಲ್ಲರೂ ಯಾವುದೋ ರಾಜಕಾರಣಕ್ಕೆ ಮಣಿಯದೇ ಇಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿಯನ್ನು ತೆರೆಯುವುದಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಚನ್ನಗಿರಿ ಎಸಿ ಕಚೇರಿ ಆರಂಭಕ್ಕೆ ಎಲ್ಲ ಅರ್ಹತೆ ಹೊಂದಿದ್ದು, ಉಪವಿಭಾಗಾಧಿಕಾರಿ ಕಚೇರಿ ಪ್ರಾರಂಭ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುತ್ತದೆ. ಯಾವುದೋ ರಾಜಕೀಯ ದೃಷ್ಟಿಯಿಂದ ಬೇರೆಡೆ ಕಚೇರಿ ಪ್ರಾರಂಭಿಸುವುದು ತಪ್ಪು. ಎಲ್ಲರ ಹಿತದೃಷ್ಟಿಯಿಂದ ಎಸಿ ಕಚೇರಿ ಪ್ರಾರಂಭಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ಯಾವುದೇ ರಾಜಕೀಯ ಒತ್ತಡವನ್ನು ಲೆಕ್ಕಿಸದೇ ಪ್ರತಿಯೊಬ್ಬರು ಹೋರಾಟಕ್ಕೆ ಕೈ ಜೋಡಿಸಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಾನಂದಪ್ಪ, ಜಿಪಂ ಸದಸ್ಯ ತೇಜಸ್ವಿ ಪಟೇಲ್, ಸಿ.ಕೆ.ಎಚ್ ಮಹೇಶ್ವರಪ್ಪ, ವಕೀಲ ವೈಡಿಎಸ್ ಸುರೇಶ್, ಕಾಂಗ್ರೆಸ್ ಯುವ ಮುಖಂಡ ವಡ್ನಾಳ್ ಜಗದೀಶ್, ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಶಿವಗಂಗಾ ಬಸವರಾಜ್, ತಾಪಂ ಮಾಜಿ ಸದಸ್ಯ ಉಸ್ಮಾನ್ ಷರೀಫ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.