ಚನ್ನಗಿರಿ: ಕೋವಿಡ್ ತಡೆಗಾಗಿ ಲಾಕ್ ಡೌನ್ ಸೇರಿದಂತೆ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರ ಸೂಚನೆ ನೀಡಿದ್ದರೂ ಜನಪ್ರತಿನಿಧಿಗಳೇ ನಿರ್ಲಕ್ಷ್ಯ ತೋರುತ್ತಿರುವ ಘಟನೆ ನಡೆಯುತ್ತಿದೆ. ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಾಮಾಜಿಕ ಅಂತರ ಮರೆತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಇದಕ್ಕೆ ಉದಾಹರಣೆ.
ಭಾನುವಾರ ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಅಂಗವಿಕಲರಿಗೆ (ಮೋಪೆಡ್) ಬೈಕ್ ಹಾಗೂ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವದನ್ನು ಮಾತ್ರ ಮರೆತರು. ಶಾಸಕರ ಜೊತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿ ನೂರಾರು ಜನ ಗುಂಪಾಗಿಯೇ ನಿಂತಿದ್ದು ಕಂಡುಬಂತು.
ಇದಲ್ಲದೇ ಶಾಸಕರು ಆಯೋಜಿಸುತ್ತಿರುವ ಆಹಾರ ಧ್ಯಾನಗಳ ಕಿಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲೂ ಸಹ ಸಾಮಾಜಿಕಅಂತರ ಕಾಪಾಡಿಕೊಳ್ಳಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಯಾವ ಸಮಯದಲ್ಲಿ ಕೋವಿಡ್ ವಕ್ಕರಿಸುತ್ತದೆ ಎಂಬ ಭಯ ತಾಲೂಕಿನ ಜನರಲ್ಲಿದೆ. ಗ್ರೀನ್‌ಜೋನ್‌ನಲ್ಲಿದ್ದ ಜಿಲ್ಲೆಗಳ ಪರಿಸ್ಥಿತಿ ನಮ್ಮ ಕಣ್ಮುಂದೆಯಿದೆ. ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿದ್ದಾರೆ. ಕೋವಿಡ್ ವಿರುದ್ಧ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಶಾಸಕರು ಜನರನ್ನು ಒಂದೆಡೆ ಸೇರಿಸಿ ಪ್ರಚಾರ ತೆಗೆದುಕೊಳ್ಳುವ ಸಮಯವಲ್ಲ. ಆಹಾರ ಕಿಟ್‌ಗಳನ್ನು ಮನೆ ಬಾಗಿಲಿಗೆ ತಲುಪಿಸಲಿ.
ವಡ್ನಾಳ್ ಜಗದೀಶ್,
ಕೆಪಿಸಿಸಿ ಸದಸ್ಯ
ಈ ಕಾರ್ಯಕ್ರಮದಲ್ಲಿ ನಾನು ಇರಲ್ಲಿಲ್ಲ, ತಾಲೂಕು ಗಡಿಭಾಗದ ಚೆಕ್‌ಪೋಸ್ಟ್‌ಗಳ ವೀಕ್ಷಣೆಗೆ ಹೋಗಿದ್ದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಪುರಸಭೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಿರೀಶ್ ಬಾಬು,
ತಹಶೀಲ್ದಾರ್-ಚನ್ನಗಿರಿ