ಚನ್ನಗಿರಿ: ಭಾರತೀಯ ಸಂಸ್ಕೃತಿಯನ್ನು ನಾವು ಜನಪದ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾಧ್ಯ, ಬದುಕು ಹಾಗೂ ಸಂಬಂಧವನ್ನು ಕಟ್ಟಲು ಜನಪದ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಸರ್ಕಾರಿ ಜ್ಯೂ.ಕಾಲೇಜ್ ಅವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಪದ ಸಾಹಿತ್ಯ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಆದರೆ ನಾವೆಲ್ಲರೂ ಜನಪದ ಸಾಹಿತ್ಯ ಮರೆಯುತ್ತಿದ್ದೇವೆ. ಬರಿ ಸರಕಾರದ ಒಂದು ಇಲಾಖೆಯಿಂದ ಜನಪದ ಸಾಹಿತ್ಯ ಉಳಿಸಿ ಪೋಷಿಸುವುದು ಸಾಧ್ಯವಿಲ್ಲ. ಜನಪರರ ಪದವಾದ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಬೇಕಿದೆ ಎಂದು ಹೇಳಿದರು.
ಜನಪದ ಸಾಹಿತ್ಯ ಕಲೆ ಈ ಮಣ್ಣಿನಿಂದ ಉದ್ಭವಿಸಿದ್ದು ಹಾಗೂ ನಮ್ಮೆಲ್ಲ ಸಾಹಿತ್ಯದ ಬೇರು. ಜಾನಪದ ಸಂಭ್ರಮವನ್ನು ವಿದ್ಯಾರ್ಥಿಗಳು ಆನಂದಿಸಿ, ಅನುಭವಿಸಬೇಕು. ಮಕ್ಕಳಿಗೆ ಜಾನಪದವನ್ನು ಪರಿಚಯಿಸಬೇಕಾದ ನಾವುಗಳೇ ಮೊಬೈಲ್ ಗೀಳಿಗೆ ಅಂಟಿಕೊಂಡಿರುವುದು ದುರಂತ. ಸಂಸ್ಕೃತಿ, ಪರಂಪರೆಯ ನಾಡು ನಮ್ಮದು. ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಅನುಕರಣೆ ಮಾಡಿದರೆ ನಾವು ಅವರ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿ ಅಗಾಧ ಶಕ್ತಿಯಿದೆ. ಅದನ್ನು ನಾಶಪಡಿಸದೇ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದರು.
ಜನಪದ ಸಾಹಿತಿ ಸಿದ್ಧನಮಠದ ಯುಗಧರ್ಮ ರಾಮಣ್ಣ ಮಾತನಾಡಿ, ಜನಪದ ಸಾಹಿತ್ಯದಲ್ಲಿರುವ ಜ್ಞಾನ ಯಾವ ವಿಶ್ವವಿದ್ಯಾಲಯದಲ್ಲಿಯೂ ಸಿಗುವುದಿಲ್ಲ. ಸ್ವಂತಿಕೆ, ಅನುಭವ, ಬದುಕಿನೊಂದಿಗೆ ಹೋರಾಟ ಇವೆಲ್ಲ ಜನಪದರು ಕಟ್ಟಿಹಾಡಿದ ಸಾಹಿತ್ಯವಾಗಿದೆ ಇದರಲ್ಲಿ ಜೀವಂತಿಕೆಯಿದೆ. ಇಂತಹ ಸಾಹಿತ್ಯವನ್ನು ಕಗ್ಗೊಲೆ ಮಾಡಲಾಗುತ್ತಿದೆ. ಜನಪದ ಕಲೆ, ಸಾಹಿತ್ಯ ಮರೆತರೆ ನಿಜಕ್ಕೂ ನಮ್ಮ ಸಂಸ್ಕೃತಿ ವಿನಾಶದತ್ತ ಸಾಗಲಿದೆ ಎಂದರು.
ನಮ್ಮಲ್ಲಿನ ಸಂಸ್ಕೃತಿ, ಸಾಹಿತ್ಯ ಹಾಳಾಗಿದೆ, ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ ಸೇರಿದಂತೆ ವಿವಿಧ ಶಬ್ದಗಳನ್ನು ಬಳಸುತ್ತಿದ್ದು. ಮಕ್ಕಳ ಮನಸ್ಥಿಯನ್ನು ಈ ಪದಗಳು ಹಾಳುಮಾಡುತ್ತಿವೆ. ಇಷ್ಟದರೂ ನಮ್ಮ ಜನರಿಗೆ ಬುದ್ಧಿ ಬರುತ್ತಿಲ್ಲ, ತಂದೆ, ತಾಯಿ, ಮಕ್ಕಳು, ಅಕ್ಕ, ತಂಗಿ, ತಮ್ಮ, ಮಗಳು, ಚಿಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಈ ಸಂಬಂಧಗಳು ಗಟ್ಟಿಯಾಗಿ ಉಳಿಯಬೇಕಾದರೆ ಜನಪದ ಸಾಹಿತ್ಯ ಪ್ರಜ್ಞೆ ಮಕ್ಕಳಿಗೆ ತಿಳಿಸಬೇಕು ಎಂದರು.
ಜನಪರ ಉತ್ಸವ ನಿಮಿತ್ತ ಪಟ್ಟಣದ ಪ್ರವಾಸಿ ಮಂದಿರದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ಗಾರುಡಿ ಗೊಂಬೆ, ಮಹಿಳಾ ವೀರಗಾಸೆ, ಪೂಜಾ ಕುಣಿತ, ನಂದೀಧ್ವಜ, ಪಟಾ ಕುಣಿತ, ಕಹಳೆ ವಾದನ, ಕಂಸಾಳೆ, ನಗಾರಿ, ತಮಟೆ ವಾದನ, ಕೀಲು ಕುದುರೆ ಮೊದಲಾದ ಕಲಾ ತಂಡಗಳ ಮೆರವಣಿಗೆ ನಡೆಯಿತು. ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ತಾಪಂ ಅಧ್ಯಕ್ಷೆ ಉಷಾಶಶಿಕುಮಾರ್, ಸದಸ್ಯೆ ಗಾಯಿತ್ರಿ ಅಣ್ಣಯ್ಯ, ತಹಶೀಲ್ದಾರ್ ಎನ್.ಜೆ. ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪುರಸಭೆ ಸದಸ್ಯೆ ಯಶೋಧಮ್ಮ, ಪಟ್ಲಿನಾಗರಾಜ್, ಪರಮೇಶ್ವರಪ್ಪ, ಮತ್ತಿತರರಿದ್ದರು.