Advertisement

ಕೆ. ಹೊಸಹಳ್ಳಿ ಕೆರೆಗೆ ಗ್ರಾಮಸ್ಥರೇ ನೀರು ಹರಿಸಿದ್ರು!

11:26 AM Nov 07, 2019 | Team Udayavani |

„ಶಶೀಂದ್ರ ಸಿ.ಎಸ್‌.

Advertisement

ಚನ್ನಗಿರಿ: ಗ್ರಾಮೀಣ ಕೆರೆಗಳು ರೈತರ ಜೀವನಾಡಿಯಾಗಿವೆ. ಅಂತಹ ಕೆರೆಗಳು ನೀರಿಲ್ಲದೆ ಒಣಗಿದ ಮೇಲೆ ನಿರ್ಲಕ್ಷ್ಯಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ಸರಕಾರದ ಯಾವುದೇ ಅನುದಾನ-ಯೋಜನೆ ಇಲ್ಲದೇ ದಶಕಗಳ ಹಿಂದೆ ಒಣಗಿದ್ದ ಕೆರೆಯನ್ನು ಗ್ರಾಮಸ್ಥರು ತುಂಬಿಸಿದ್ದಾರೆ.

ಹೌದು, ಇಂತದೊಂದು ವಿನೂತ ಪ್ರಯತ್ನವನ್ನು ತಾಲೂಕಿನ ಕೆ. ಹೊಸಹಳ್ಳಿ ಗ್ರಾಮಸ್ಥರು ಮಾಡಿದ್ದು, ತಾಲೂಕಿನ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೆ. ಹೊಸಹಳ್ಳಿ ಗ್ರಾಮದಲ್ಲಿ ಕೇವಲ 250ರಿಂದ 300 ಜನ ವಾಸವಾಗಿದ್ದಾರೆ. ಗ್ರಾಮದಲ್ಲಿನ ಕೆರೆ ಒಣಗಿ ಜನ-ಜಾನುವಾರಗಳಿಗೆ ಕುಡಿಯುವ ನೀರು ಸಿಗದೇ ಪರದಾಡುವ ಸ್ಥಿತಿ ಇವರದು. ಈ ಸಮಸ್ಯೆ ಪರಿಹಾರಕ್ಕೆ ಸರಕಾರ, ಜನಪ್ರತಿನಿಧಿ ಗಳ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ.

ಮತ್ತಿಹಳ್ಳದಿಂದ ಕೆರೆಗೆ ನೀರು: ಗ್ರಾಮದ ಕೆರೆ ಸುಮಾರು 6 ಎಕರೆ ವಿಸ್ತೀರ್ಣ ಹೊಂದಿದ್ದು 15ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯ ಸಮೀಪದಲ್ಲಿಯೇ ಮಳೆಗಾಲದಲ್ಲಿ ಮತ್ತಿಹಳ್ಳ ಹರಿಯುತ್ತದೆ. ಗ್ರಾಮಸ್ಥರೆಲ್ಲರೂ ಸ್ವಲ್ಪ ಹಣ ಒಗ್ಗೂಡಿಸಿ ಮತ್ತಿಹಳ್ಳಕ್ಕೆ ಮೋಟಾರ್‌ ಅಳವಡಿಸಿ ಪೈಪ್‌ ಜೋಡಣೆ ಮಾಡಿ ಕೆರೆಗೆ ನೀರು ಹರಿಸಿದ್ದಾರೆ. ಸತತ 20ದಿನ ನೀರು ಹರಿಸಿದ ನಂತರ ಕೆರೆ ತುಂಬಿ ಕೊಡಿ ಬಿದ್ದಿದೆ. ಗ್ರಾಮಸ್ಥರೇ ಕೆರೆಯನ್ನು ತುಂಬಿಸಿರುವ ವಿಷಯ ತಿಳಿದ ತಹಶೀಲ್ದಾರ್‌ ನಾಗರಾಜ್‌ ಕೆರೆಗೆ ಭೇಟಿ ನೀಡಿ ಬಾಗಿನ ಅರ್ಪಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next